ಕುವೆಂಪು ಭಾವಚಿತ್ರದ ಮುಂದೆ ಮಡಿಕೆ ಒಡೆದು ಅವಮಾನ – ಕುಲಸಚಿವ
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯ ನಲ್ಲಿ ಆಡಳಿತ ವೈಫಲ್ಯಗಳ ವಿರುದ್ಧ ವಿದ್ಯಾರ್ಥಿಗಳ ಅಸಮಾಧಾನ ಇಂದು ಭುಗಿಲೆದ್ದಿದ್ದು, ಎನ್ಎಸ್ಯುಐ( NSUI) ಕಾರ್ಯಕರ್ತರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ.ಎನ್ಎಸ್ಯುಐ ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ನಂತರ ಕುಲಪತಿಗಳ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ-ನುಗ್ಗಾಟವೂ ನಡೆಯಿತು.


ಪ್ರತಿಭಟನೆಗೆ ಪ್ರಮುಖ ಕಾರಣಗಳಾಗಿ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. ಕಳೆದ ಐದು ತಿಂಗಳಿನಿಂದ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗದೇ ಇರುವುದು ವಿದ್ಯಾರ್ಥಿಗಳಲ್ಲಿ ಭಾರೀ ಆತಂಕ ಮೂಡಿಸಿದೆ. ಜೊತೆಗೆ, ಕಳೆದ ಮೂರು ವರ್ಷಗಳಿಂದ ಪದವಿ ಅಂಕಪಟ್ಟಿಗಳನ್ನು ವಿತರಿಸದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿದೆ. ಅಂಕಪಟ್ಟಿಗಳಿಲ್ಲದೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ವಿಶ್ವವಿದ್ಯಾಲಯವು ಪರೀಕ್ಷಾ ಮತ್ತು ಪ್ರವೇಶ ಶುಲ್ಕಗಳನ್ನು ಏಕಾಏಕಿ ಹೆಚ್ಚಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಇದು ಭಾರೀ ಹೊರೆ ಆಗಿದೆ ಎಂದು ಅವರು ಆರೋಪಿಸಿದ್ದಾರೆ. ಇದಲ್ಲದೆ, ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದಾಗಿ ಫಲಿತಾಂಶಗಳಲ್ಲಿ ಗೊಂದಲ ಉಂಟಾಗಿ, ಪಾಸ್ ಆದ ವಿದ್ಯಾರ್ಥಿಗಳು ಫೇಲ್ ಎಂದು ತೋರಿಸುವ ಘಟನೆಗಳೂ ವರದಿಯಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಕುಲಪತಿ ಶರತ್ ಅನಂತಮೂರ್ತಿ ಅವರ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ನಾಮಫಲಕ ಮಸಿ ಬಳಿದಿದ್ದಾರೆ ಮತ್ತು ಹಲವು ವಸ್ತುಗಳನ್ನು ಹಾನಿಗೊಳಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಭದ್ರತಾ ಸಿಬ್ಬಂದಿಯನ್ನು ತಡೆದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿತ್ತು.

ಕುಲಪತಿಗಳ ಪ್ರತಿಕ್ರಿಯೆ: ಘಟನೆಗೆ ಕಠಿಣ ಕ್ರಮದ ಎಚ್ಚರಿಕೆ
ಘಟನೆ ಕುರಿತು ಪ್ರತಿಕ್ರಿಯಿಸಿದ ಶರತ್ ಅನಂತಮೂರ್ತಿ ಅವರು, ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ದಾಂಧಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಎಂಬಿಎ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಮಾರಾಟ ಮಳಿಗೆಯಲ್ಲಿ ಇದ್ದ ವೇಳೆ, ಕುಲಪತಿ ಕಚೇರಿಯಿಂದ ತುರ್ತು ಕರೆ ಬಂದಿದ್ದು, ಕೆಲವರು ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು, ಅಲ್ಲಿ ತಮ್ಮ ವಿರುದ್ಧ ಘೋಷಣೆ ಕೂಗಿ ಘೇರಾವ್ ಮಾಡಲಾಗಿದ್ದು, ತಳ್ಳಾಟದ ಯತ್ನವೂ ನಡೆದಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ, ಕುವೆಂಪು ಅವರ ಭಾವಚಿತ್ರದ ಎದುರೇ ಮಡಿಕೆಗಳನ್ನು ಒಡೆದು ಅವಮಾನ ಮಾಡುವ ಪ್ರಯತ್ನ ನಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಪ್ರತಿಭಟನೆ ನಡೆಸಿದವರು ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಅವರ ಸಮಸ್ಯೆಗಳನ್ನೂ ಸರಿಯಾಗಿ ತಿಳಿಸಿಲ್ಲ. ಈ ಹಿಂದೆ ನಾಲ್ವರು ಮನವಿ ನೀಡಿದ್ದು ನಾನು ಸ್ವೀಕರಿಸಿದ್ದೆ. ಆದರೆ ಇಂದಿನ ದಾಂಧಲೆ ನಡೆಸಿದವರು ನಿಜವಾಗಿಯೂ ವಿದ್ಯಾರ್ಥಿಗಳೇನಾ ಎಂಬ ಅನುಮಾನ ಇದೆ. ಕುವೆಂಪು ವಿಶ್ವವಿದ್ಯಾಲಯ ಅತ್ಯುತ್ತಮ ವಿಶ್ವವಿದ್ಯಾಲಯಗಳಲೊಂದಾಗಿ ಗುರುತಿಸಿಕೊಳ್ಳುತ್ತದೆ ಇಂತಹ ಸಮಯದಲ್ಲಿ ನಮ್ಮ ವಿಶ್ವವಿದ್ಯಾಲಯದ ಹೆಸರನ್ನು ಹಾಳು ಮಾಡಲು ಕೆಲವು ಕಿಡಿಗೇಡಿಗಳು ಇಂತಹ ಪ್ರಯತ್ನ ಮಾಡಿರಬಹುದು ಈ ಘಟನೆ ಹಿಂದೆ ಹೊರಗಿನವರ ಕೈವಾಡ ಇರಬಹುದೆಂಬ ಶಂಕೆ ಇದೆ” ಎಂದು ಹೇಳಿದರು.

ಕುಲಸಚಿವರ ಸ್ಪಷ್ಟನೆ: ಸಮಸ್ಯೆಗಳಿಗೆ ಶೀಘ್ರ ಪರಿಹಾರ ಭರವಸೆ
ಇದೇ ವೇಳೆ ಕುಲಸಚಿವ ಹೇಮಂತ್ ಎನ್ ಪ್ರತಿಕ್ರಿಯಿಸಿ, ಪರೀಕ್ಷಾ ಫಲಿತಾಂಶಗಳಲ್ಲಿ ಉಂಟಾದ ಗೊಂದಲ ತಾಂತ್ರಿಕ ದೋಷದಿಂದಾಗಿದ್ದು, ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
“ಮೇ ತಿಂಗಳೊಳಗೆ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿ, ಯಾವುದೇ ಗೊಂದಲ ಉಳಿಯದಂತೆ ನೋಡಿಕೊಳ್ಳುತ್ತೇವೆ. ಪರೀಕ್ಷಾ ಶುಲ್ಕವನ್ನು ರಾಜ್ಯದ ಇತರ ವಿಶ್ವವಿದ್ಯಾಲಯಗಳಿಗಿಂತ ಕಡಿಮೆ ಮಟ್ಟದಲ್ಲೇ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಕೆಲವು ಸಮಸ್ಯೆಗಳು ಉಂಟಾಗಿರಬಹುದು, ಅವುಗಳನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ” ಎಂದು ಅವರು ಭರವಸೆ ನೀಡಿದರು.















Leave a Reply