ಶಿವಮೊಗ್ಗ : ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿ ಕಚ್ಛಾ ತೈಲ, ನೈಸರ್ಗಿಕ ಅನಿಲದ ಸಮಸ್ಯೆ ಎದುರಾಗಿದ್ದರೂ ಕೂಡ, ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀಯವರು ತಮ್ಮ ಸಮರ್ಥ ನಾಯಕತ್ವದಿಂದ ದೇಶದ ಯಾವುದೇ ಪ್ರಜೆಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಣದಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆ (District Consultative Committee Meeting) ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯನ್ನು (District Level Review Committee Meeting) ಉದ್ದೇಶಿಸಿ ಮಾತನಾಡಿದ ಸಂಸದರು ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯ ಪ್ರಗತಿಯನ್ನು ವಿವರವಾಗಿ ಪರಿಶೀಲಿಸಿದರು. ಇಂದು ಮಾನ್ಯ ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸಿ, ಪೆಟ್ರೋಲ್, ಡಿಸೇಲ್ ಎಲ್.ಪಿ.ಜಿ ಗ್ಯಾಸ್ ಸರಬರಾಜಿನಲ್ಲಿ ಸಾರ್ವಜನಿಕರಿಗೆ ಯಾವುದೇ ವ್ಯತ್ಯಯ ಇಲ್ಲದೇ ದರದಲ್ಲೂ ಸ್ಥಿರತೆ ಕಂಡುಕೊಂಡಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಿಲ್ಲವೆಂದು ತಿಳಿಸಿದರು. ಹಾಗೂ ಅದಕ್ಕೆ ಪರ್ಯಾಯವಾಗಿ ದೇಶದಲ್ಲಿ ಎಥೆನಾಲ್ ಉತ್ಪಾದನೆ ಆಗುತ್ತಿದ್ದು, ಅದರ ಬಳಕೆಯನ್ನು ಮಾಡಿಕೊಳ್ಳುವಂತೆ ಕರೆಕೊಟ್ಟಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಯವರ ವಿವಿಧ ಯೋಜನೆಯ ಫಲಾನುಭವಿಗಳಿಗೆ ವಿವಿಧ ಬ್ಯಾಂಕ್ ಗಳಿಂದ ಸಾಲಗಳನ್ನು ಮಂಜೂರು ಮಾಡಿದ್ದು, ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಚೆಕ್ ಗಳನ್ನು ವಿತರಿಸಿ, ಡಿಜಿಟಲ್ ತಂತ್ರಜ್ಞಾನದ ಮೂಲಕ ಆನ್ ಲೈನ್ ಸೌಲಭ್ಯಗಳನ್ನು ಬ್ಯಾಂಕಿಂಗ್ ಕ್ಷೇತ್ರ ಹೊಂದಿದ್ದು, ಹಿರಿಯ ನಾಗರಿಕರು, ರೈತರು ಹಾಗೂ ಹಳ್ಳಿಯ ಜನರು ಬ್ಯಾಂಕಿಗೆ ಬಂದು ವ್ಯವಹಾರ ಮಾಡುವಾಗ ಅವರೊಂದಿಗೆ ತಾಳ್ಮೆಯಿಂದ ಸಹಕರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುವಂತೆ ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿ.ಎಂ ವಿಶ್ವಕರ್ಮ ಯೋಜನೆಯಡಿ ಬ್ಯಾಂಕ್ ಗಳಲ್ಲಿ ಸುಮಾರು ಅರ್ಧದಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕೃಗೊಂಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸಾಲ, ಶಿಕ್ಷಣ ಸಾಲ, ವಸತಿ ಯೋಜನೆಗೆ ಸಾಲ ವಿತರಣೆಗೆ ಆದ್ಯತೆ ನೀಡಬೇಕು ಎಂದರು. ಬ್ಯಾಂಕ್ ಅಧಿಕಾರಿಗಳು ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕು. 263 ಶಾಖೆಗಳಲ್ಲಿ ಮಾತ್ರ ಬಿ.ಎಲ್.ಬಿ.ಸಿ ಸಭೆ ಆಗಿದೆ. ಇನ್ನೂ 85 ಶಾಖೆಗಳಲ್ಲಿ ಸಭೆಗಳನ್ನು ನಡೆಸಿರುವುದಿಲ್ಲ. ನಿಯಮಿತವಾಗಿ ಸಭೆಗಳನ್ನು ಕೈಗೊಂಡು ಕ್ರಮ ವಹಿಸಬೇಕೆಂದು ಇದೇ ವೇಳೆ ತಿಳಿಸಿದರು.
ಇದೇ ಮಾರ್ಚ್ 24 ರಿಂದ 26 ರ ವರೆಗೆ ನಗರದ ಡಾ: ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪಿ.ಎಂ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತ ಮಾರಾಳ ಮೇಳ ಏರ್ಪಡಿಸಲಾಗಿದ್ದು, 50 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಫಲಾನುಭವಿಗಳು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಬ್ಯಾಂಕ್ ಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೆನರಾ ಬ್ಯಾಂಕ್ ಡಿ.ಜಿ.ಎಂ ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ದೇವರಾಜ್ ಆರ್ ರವರು ಮಾತನಾಡಿ 2025 ರ ಡಿಸೆಂಬರ್ ಅಂತ್ಯಕ್ಕೆ ಕೃಷಿ ಕ್ಷೇತ್ರದಲ್ಲಿ ಶೇಕಡ 74.26 ಪ್ರಗತಿ ಸಾಧನೆ ಮಾಡಿದ್ದು, 2024 ನೇ ಸಾಲಿಗಿಂತ ಶೇಕಡ 31.26 ಪ್ರಗತಿ ಸಾಧಿಸಲಾಗಿದೆ. ಎಂ.ಎಸ್.ಎಂ.ಇ ವಲಯದಲ್ಲಿ ಶೇಕಡ 80.03 ಪ್ರಗತಿ ಸಾಧಿಸಿದ್ದು, 2024 ನೇ ಸಾಲಿಗಿಂತ ಶೇಕಡ 11.49 ಹೆಚ್ಚು ಪ್ರಗತಿ ಸಾಧಿಸಲಾಗಿದೆ. ವಸತಿ ಸಾಲ ವಿತರಣೆ ಪ್ರಗತಿ ಕಡಿಮೆಯಾಗಿದ್ದು, ಆದ್ಯತೆ ಮೆಲೆ ಸಾಲ ವಿತರಣೆಗೆ ಬ್ಯಾಂಕ್ ಗಳು ಕ್ರಮ ವಹಿಸಬೇಕು. ಪಿ.ಎಂ ವಿಶ್ವಕರ್ಮ ಯೋಜನೆಯಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯ ಸೌಲಭ್ಯಗಳು ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪುತ್ತಿದೆ ಅಂದರೆ ಅದಕ್ಕೆ ಬ್ಯಾಂಕಿಂಗ್ ಅಧಿಕಾರಿಗಳೇ ಕಾರಣ ಎಂದು ಇದೇ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪ್ರಶಂಸೆ ವ್ಯಕ್ತಿಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಹೇಮಂತ್, ಕೆನರಾ ಬ್ಯಾಂಕ್ ಡಿ.ಜಿ.ಎಂ ಶ್ರೀ ಆರ್ ದೇವರಾಜ್, ನಬಾರ್ಡ್ ಡಿ.ಡಿ.ಎಂ ಶ್ರೀ ಶರತ್ ಗೌಡ ಪಿ, ಆರ್.ಬಿ.ಐ ಎ.ಜಿ.ಎಂ ಶ್ರೀ ಸೂರಜ್, ಕೆನರಾ ಬ್ಯಾಂಕ್ ಮಾರ್ಗದರ್ಶಿ ಅಧಿಕಾರಿ ಶ್ರೀ ಹನುಮಂತಪ್ಪ ಪಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.














Leave a Reply