ಶಿವಮೊಗ್ಗ: ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಿ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪ್ರವೇಶಾತಿಯನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಮನವಿಯಲ್ಲಿ ವಿದ್ಯಾರ್ಥಿಗಳ ಬಸ್ ಸಮಸ್ಯೆ, ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆಯ ಕೊರತೆ, ಅತಿಥಿ ಉಪನ್ಯಾಸಕರ ಅಭಾವ, ಕೆಪಿಎಸ್ಸಿ ಹಗರಣ ಸೇರಿದಂತೆ ಹಲವು ಶೈಕ್ಷಣಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಒತ್ತಾಯಿಸಲಾಯಿತು.
ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು ಎಂದು ಆಗ್ರಹಿಸಿದ ಎಬಿವಿಪಿ ಮುಖಂಡರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕು ಹಾಗೂ ಮಲ್ಲಿಗೇನಹಳ್ಳಿಯ ದೇವರಾಜ ಅರಸು ವಿದ್ಯಾರ್ಥಿನಿಲಯ ಸೇರಿದಂತೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಕೆಪಿಎಸ್ಸಿ ಹಗರಣದಿಂದ ಅಭ್ಯರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಇದೇ ವೇಳೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗೆ ಸಲ್ಲಿಸಿದ ಮನವಿಯಲ್ಲಿ ಸಹ್ಯಾದ್ರಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪ್ರವೇಶಾತಿಯನ್ನು ಪುನರಾರಂಭಿಸಬೇಕು, ಕಲಾ ಹಾಗೂ ವಿಜ್ಞಾನ ಕಾಲೇಜುಗಳಲ್ಲಿ ಎಂ.ಎ. ಮತ್ತು ಎಂ.ಎಸ್ಸಿ ತರಗತಿಗಳನ್ನು ಆರಂಭಿಸಬೇಕು, ಅಸಮರ್ಪಕ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ರದ್ದುಪಡಿಸಬೇಕು, ಘಟಿಕೋತ್ಸವವನ್ನು ತಕ್ಷಣ ನಡೆಸಬೇಕು ಹಾಗೂ ಕ್ರೀಡಾ ಶುಲ್ಕದ ದುರ್ಬಳಕೆಯನ್ನು ತಡೆಯಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಂಚಾಲಕ ರವಿ ಇರೋಜಿ, ಮಹಾನಗರ ಕಾರ್ಯದರ್ಶಿ ನಿರಂಜನ್ ಹೆಚ್.ಎಸ್., ಗೋಪಿ, ರಂಗಸ್ವಾಮಿ, ನಂದನ್, ವಿನಯ್, ನಿಖಿಲ್, ಅಂಜನ್, ರಂಜಿತಾ, ನಂದಿನಿ, ಶ್ವೇತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















Leave a Reply