ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸಮಿತಿಯ ಗಣೇಶೋತ್ಸವದ ಅಂಗವಾಗಿ ನಡೆದ ಸತತ 19 ಗಂಟೆಗಳ ಭವ್ಯ ರಾಜಬೀದಿ ಉತ್ಸವವು ಶುಕ್ರವಾರ ಹೊಸನಗರ ರಸ್ತೆಯ ತಾವರೆಕೆರೆಯಲ್ಲಿ ಗಣಪತಿ ಜಲಸ್ಥಂಭನದೊಂದಿಗೆ ವೈಭವಯುತವಾಗಿ ಸಂಪನ್ನಗೊಂಡಿತು.
ಗುರುವಾರ ಸಂಜೆ 5:45ಕ್ಕೆ ತಿಲಕ್ ಮಂಟಪದಿಂದ ಆರಂಭವಾದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಾನಪದ ಕಲಾತಂಡಗಳ ಮನಮೋಹಕ ಪ್ರದರ್ಶನ, ಡೊಳ್ಳು-ಕುಣಿತ ಹಾಗೂ ಭಕ್ತರ ಜಯಘೋಷದ ನಡುವೆ ಸಾವಿರಾರು ಜನರು ಉತ್ಸವದಲ್ಲಿ ಭಾಗವಹಿಸಿ ವಿನಾಯಕನಿಗೆ ಭಕ್ತಿಭಾವದಿಂದ ವಿದಾಯ ಹೇಳಿದರು.
ವಿನಾಯಕ ವೃತ್ತದಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಗಣಪತಿಗೆ ಮಾಲಾರ್ಪಣೆ ಮಾಡಿ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸಹ ಮಾರ್ಗ ಮಧ್ಯೆ ಆಗಮಿಸಿ ಗಣಪತಿಯ ದರ್ಶನ ಪಡೆದರು.
ಶಾಂತಿಯುತ ಉತ್ಸವಕ್ಕೆ ಅಭಿನಂದನೆ: ಡಿ.ವೈ.ಎಸ್.ಪಿ. ಭಾನುಪ್ರಕಾಶ್, ವೃತ್ತ ನಿರೀಕ್ಷಕ ಗೌಡರ ಗೌಡಪ್ಪ, ಪಿಎಸ್‌ಐ ರಾಜುರೆಡ್ಡಿ, ತಹಶೀಲ್ದಾರ್ ಭರತ್‌ರಾಜ್ ಸೇರಿದಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಶಾಂತಿ ಮತ್ತು ಸುವ್ಯವಸ್ಥೆಯಿಂದ ಉತ್ಸವ ಯಶಸ್ವಿಗೊಳಿಸಿದ ಹಿಂದೂ ಮಹಾಸಭಾ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
















Leave a Reply