ಅಧಿಕಾರಿವರ್ಗ ಜನರಿಗೆ ಸಹಾಯ ಮಾಡುವ ಮನಸ್ಥಿತಿ ಹೊಂದಬೇಕು: ಶಾಸಕ ಆರಗ ಜ್ಞಾನೇಂದ್ರ
ಹೊಸನಗರ: ಸರ್ಕಾರಿ ಕಚೇರಿಗಳಲ್ಲಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವ ಮನೋಭಾವ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಇರಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೆಲ ಅಧಿಕಾರಿಗಳು ಬ್ರಿಟಿಷ್ ಮನಸ್ಥಿತಿಯಲ್ಲೇ ಇದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಅಮೃತ ವಿದ್ಯಾಲಯದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಸಿಬ್ಬಂದಿ ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುತ್ತಿದ್ದರೆ ಇಂತಹ ಕಾರ್ಯಕ್ರಮಗಳ ಅಗತ್ಯವೇ ಇರುತ್ತಿರಲಿಲ್ಲ. ಆದರೆ, ಸಮಸ್ಯೆ ಹೊತ್ತು ಕಚೇರಿಗೆ ಬರುವ ಜನರಿಗೆ ಪರಿಹಾರ ನೀಡುವ ಬದಲು ಅರ್ಜಿದಾರರನ್ನು ವಾಪಸ್ ಕಳುಹಿಸುವ ಪ್ರಯತ್ನವೇ ಹೆಚ್ಚಾಗಿ ಕಂಡುಬರುತ್ತಿದೆ. ಕಷ್ಟದಲ್ಲಿರುವ ಜನಸಾಮಾನ್ಯರಿಗೆ ನೆರವಾಗುವ ಮನೋಭಾವ ಅಧಿಕಾರಿಗಳಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ತಾವು ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ನಗರ ಹೋಬಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ವಿಶೇಷ ಅನುದಾನದಡಿ ಪೊಲೀಸ್ ವಸತಿಗೃಹ ನಿರ್ಮಾಣ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದರು. ಅರಣ್ಯ ಭೂಮಿ ಸಾಗುವಳಿ ಮತ್ತು ಹಕ್ಕುಪತ್ರ ವಿತರಣೆ ಸೇರಿದಂತೆ ಕೆಲವು ಸಮಸ್ಯೆಗಳು ನ್ಯಾಯಾಲಯದಲ್ಲಿರುವ ಪ್ರಕರಣಗಳಿಂದಾಗಿ ಇತ್ಯರ್ಥವಾಗದೆ ಉಳಿದಿವೆ ಎಂದು ತಿಳಿಸಿದರು.
72 ಅರ್ಜಿಗಳ ಸಲ್ಲಿಕೆ
ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 72 ಅರ್ಜಿಗಳು ಸಲ್ಲಿಕೆಯಾಗಿವೆ. ಮುಳುಗಡೆ ಸಂತ್ರಸ್ತರ ಸಮಸ್ಯೆಗಳು, ಅರಣ್ಯ ಭೂಮಿ ಅತಿಕ್ರಮಣ, ಕಾಡುಪ್ರಾಣಿಗಳ ಹಾವಳಿ, ಖಾಸಗಿ ಜಮೀನು ವಿವಾದ, ಪಹಣಿ ತಿದ್ದುಪಡಿ, ಹಕ್ಕುಪತ್ರ, ರಸ್ತೆ, ಮಾಸಾಶನ, ಡೀಮ್ಡ್ ಅರಣ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.
ನಗರದಲ್ಲಿ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳದಿರುವುದು, ನಿರ್ಮಾಣಗೊಂಡ ನಾಡಕಚೇರಿ ಉದ್ಘಾಟನೆಯಾಗದಿರುವುದು ಹಾಗೂ ಕರಿಮನೆ ಸಂತ್ರಸ್ತರಿಗೆ ಭೂಮಿ ಮಂಜೂರಾಗದಿರುವುದು ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿಯಿಂದ ದೂರ ಉಳಿದ ನಗರ ಹೋಬಳಿ; ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ!
ನಗರ ಹೋಬಳಿಯಲ್ಲಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಇದರ ನಡುವೆ, ಹೋಬಳಿಯ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರವೂ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆ, ಕುಡಿಯುವ ನೀರು, ಅರಣ್ಯ ಭೂಮಿ ಸಮಸ್ಯೆ, ಮುಳುಗಡೆ ಸಂತ್ರಸ್ತರ ಸಂಕಷ್ಟಗಳಂತಹ ಹಲವು ಸಮಸ್ಯೆಗಳ ನಡುವೆ ಯುವಕರ ಈ ಅಳಲು ಕೂಡ ಗ್ರಾಮೀಣ ಭಾಗದ ಸಾಮಾಜಿಕ ಸ್ಥಿತಿಗತಿಗಳತ್ತ ಗಮನ ಸೆಳೆಯುವಂತಿತ್ತು.
ತಡವಾಗಿ ಆರಂಭವಾದ ಸಭೆ: ಸಾರ್ವಜನಿಕರ ಆಕ್ರೋಶ
ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಶಾಸಕ ಆರಗ ಜ್ಞಾನೇಂದ್ರ ಮಧ್ಯಾಹ್ನ ಸುಮಾರು 2.30ಕ್ಕೆ ಆಗಮಿಸಿದರು. ಬೆಳಗ್ಗೆಯಿಂದಲೇ ಕಾಯುತ್ತಿದ್ದ ಸಾರ್ವಜನಿಕರು ಶಾಸಕರ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಿದ್ದು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದ್ದರು.
ಒಂದೇ ಸಮಯದಲ್ಲಿ ಎರಡು ತಾಲ್ಲೂಕುಗಳಲ್ಲಿ ಸಭೆ ನಿಗದಿಪಡಿಸಿಕೊಂಡಿದ್ದ ಶಾಸಕರ ನಡೆಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಎರಡು ತಾಲ್ಲೂಕುಗಳ ಸಭೆಗಳು ಒಂದೇ ಸಮಯದಲ್ಲಿ ನಿಗದಿಯಾಗಿದ್ದರಿಂದ ಇಲ್ಲಿಗೆ ಆಗಮಿಸುವುದು ತಡವಾಯಿತು. ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಭರತ್ರಾಜ್, ಗ್ರೇಡ್-2 ತಹಶೀಲ್ದಾರ್ ಸುಧೀಂದ್ರಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರಕುಮಾರ್, ಕೆಡಿಪಿ ಸದಸ್ಯೆ ಸುಮಾ ಸುಬ್ರಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಾಂತರಾಜ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್, ಸಿಡಿಪಿಒ ಗಾಯತ್ರಿ, ಕಂದಾಯ ಇಲಾಖೆಯ ಶಿರಸ್ತೇದಾರ್ ಕಟ್ಟೆ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
















Leave a Reply