ಹೊಂಬುಜ ಶ್ರೀಕ್ಷೇತ್ರದಲ್ಲಿ ನಾಲ್ಕನೇ ದಿನದ ಶರನ್ನವರಾತ್ರಿ ವಿಶೇಷ ಪೂಜೆ|ಧಾರ್ಮಿಕ ಆಚರಣೆಗಳಿಂದ ಜೀವನ ವಿಕಸನ: ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

Addaheading 20261014 193952 0000 ಹೊಂಬುಜ ಶ್ರೀಕ್ಷೇತ್ರದಲ್ಲಿ ನಾಲ್ಕನೇ ದಿನದ ಶರನ್ನವರಾತ್ರಿ ವಿಶೇಷ ಪೂಜೆ|ಧಾರ್ಮಿಕ ಆಚರಣೆಗಳಿಂದ ಜೀವನ ವಿಕಸನ: ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
Spread the love

ರಿಪ್ಪನ್ ಪೇಟೆ : ನವರಾತ್ರಿಯ ವಿಜಯದಶಮಿ ಪರ್ವವು ಅನಾದಿ ಕಾಲದಿಂದಲೂ ಭಾರತೀಯರ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಶಾಸ್ತ್ರಗ್ರಂಥಗಳ ಪಠಣ ಮತ್ತು ಸ್ತೋತ್ರಗಳ ಸ್ತುತಿಯಿಂದ ಮಾನಸಿಕ ಕ್ಲೇಶಗಳು ದೂರವಾಗುತ್ತವೆ. ಧಾರ್ಮಿಕ ಆಚರಣೆಗಳು ಪ್ರತಿಯೊಬ್ಬರ ಜೀವನದ ವಿಕಸನಕ್ಕೆ ಪೂರಕವಾಗಿದ್ದು, ಸಾಮೂಹಿಕ ಪೂಜೆ ಮತ್ತು ಭಜನೆಗಳು ಸಾಮಾಜಿಕ ಸಾಮರಸ್ಯ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸುತ್ತವೆ ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ತಿಳಿಸಿದರು.

ಹೊಂಬುಜ ಶ್ರೀಕ್ಷೇತ್ರದಲ್ಲಿ ಬುಧವಾರ ನಡೆದ ಶರನ್ನವರಾತ್ರಿ ಉತ್ಸವದ ನಾಲ್ಕನೇ ದಿನದ ವಿಶೇಷ ಷೋಡಶೋಪಚಾರ ಧಾರ್ಮಿಕ ಪೂಜಾ ವಿಧಿವಿಧಾನಗಳ ಬಳಿಕ ನಡೆದ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.

ಸಾಮೂಹಿಕ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಪರಸ್ಪರ ಸಹಕಾರ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ವೃದ್ಧಿಸುತ್ತವೆ. ಪೂಜೆ ಹಾಗೂ ಭಜನೆಯಿಂದ ದೊರೆಯುವ ಸಕಾರಾತ್ಮಕ ಫಲವು ವ್ಯಕ್ತಿಯ ಮನಸ್ಸಿಗೆ ಶಾಂತಿ ನೀಡುವುದರೊಂದಿಗೆ ಸಮಾಜದ ಎಲ್ಲರಿಗೂ ಕ್ಷೇಮವನ್ನು ಉಂಟುಮಾಡಲಿ ಎಂದು ಶ್ರೀಗಳು ಹಾರೈಸಿ ಭಕ್ತರಿಗೆ ಶ್ರೀಫಲ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಕಂಬದಹಳ್ಳಿ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಉಪಸ್ಥಿತರಿದ್ದರು.

ಶರನ್ನವರಾತ್ರಿ ಉತ್ಸವದ ಅಂಗವಾಗಿ ಕುಮುದ್ವತಿ ತೀರ್ಥದಿಂದ ಆಗ್ರೋದಕವನ್ನು ತಂದು ಶ್ರೀಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸಮರ್ಪಿಸಲಾಯಿತು. ವಿವಿಧ ಬಗೆಯ ಹೂವು ಮತ್ತು ಹಣ್ಣುಗಳಿಂದ ದೇವತಾ ಮೂರ್ತಿಗಳನ್ನು ಅಲಂಕರಿಸಿ, ವಾದ್ಯಗೋಷ್ಠಿಯೊಂದಿಗೆ ಜಿನಾಗಮೋಕ್ತ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಗಳಲ್ಲಿಯೂ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

ರಾತ್ರಿ ಸಂಪ್ರದಾಯದಂತೆ ಅಷ್ಟಾವಧಾನ ಹಾಗೂ ಜಿನನಾಮ ಸ್ತುತಿ ಕಾರ್ಯಕ್ರಮಗಳು ಜರುಗಿದವು. ಊರಿನ ಹಾಗೂ ಪರವೂರಿನ ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಶ್ರೀ ಪದ್ಮಾವತಿ ಮಹಿಳಾ ಮಂಡಳಿಯ ಶ್ರಾವಕಿಯರು ಶರನ್ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು.

ಉತ್ಸವದ ಅಂಗವಾಗಿ ಸೇವಾಕರ್ತರಾದ ವೇಣೂರಿನ ಪ್ರವೀಣ್ ಇಂದ್ರ ಅವರ ಕುಟುಂಬವನ್ನು ಶ್ರೀಗಳು ಗೌರವಿಸಿ ಆಶೀರ್ವದಿಸಿದರು. ನಾರಂಗ, ಕಾಶ್ಮೀರ ಫಲ ಸೇರಿದಂತೆ ವಿವಿಧ ಹಣ್ಣುಗಳಿಂದ ದೇವತಾ ಸನ್ನಿಧಿ ಹಾಗೂ ಅಲಂಕಾರಿಕ ವ್ಯವಸ್ಥೆಗಳನ್ನು ಮನಮೋಹಕವಾಗಿ ಸಜ್ಜುಗೊಳಿಸಲಾಗಿತ್ತು.

ಶರನ್ನವರಾತ್ರಿ ಉತ್ಸವವು ಹೊಂಬುಜ ಶ್ರೀಕ್ಷೇತ್ರದಲ್ಲಿ ಧಾರ್ಮಿಕ ಭಕ್ತಿ, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಮೂಹಿಕ ಸೌಹಾರ್ದತೆಯ ವಾತಾವರಣವನ್ನು ಮೂಡಿಸಿತು.

IMG 20261014 WA0014 1 ಹೊಂಬುಜ ಶ್ರೀಕ್ಷೇತ್ರದಲ್ಲಿ ನಾಲ್ಕನೇ ದಿನದ ಶರನ್ನವರಾತ್ರಿ ವಿಶೇಷ ಪೂಜೆ|ಧಾರ್ಮಿಕ ಆಚರಣೆಗಳಿಂದ ಜೀವನ ವಿಕಸನ: ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

Leave a Reply

Your email address will not be published. Required fields are marked *

error: Content is protected !!