ರಿಪ್ಪನ್ಪೇಟೆ: ಗಣೇಶೋತ್ಸವವು ಭಾರತದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲೇ ರಾಷ್ಟ್ರೀಯ ಏಕತೆಯ ಸಂದೇಶ ಸಾರಲು ಆರಂಭವಾದ ಹಬ್ಬವಾಗಿದ್ದು, ರಿಪ್ಪನ್ಪೇಟೆಯೂ ಕುವೆಂಪು ಅವರ “ಸರ್ವ ಜನಾಂಗದ ಶಾಂತಿಯ ತೋಟ”ದಂತಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಭಾನುಪ್ರಕಾಶ್ ಜೆ. ಹೇಳಿದರು.
ಪಟ್ಟಣದ ಜಿ.ಎಸ್.ಬಿ ಸಭಾಭವನದಲ್ಲಿ ಶುಕ್ರವಾರ ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವಗಳು ಯಾವುದೇ ಅಡಚಣೆಯಿಲ್ಲದೆ ನಡೆಯಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಹಾಗೂ ಉತ್ಸವ ಸಮಿತಿಗಳು ಕಾನೂನು ಚೌಕಟ್ಟಿನೊಳಗೆ ಸಹಕರಿಸಬೇಕು. ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ಶಾಂತಿ ಕಾಪಾಡಲು ಪರಸ್ಪರ ವಿಶ್ವಾಸ ಮುಖ್ಯ ಎಂದರು.

ತಹಶೀಲ್ದಾರ್ ಭರತ್ ರಾಜ್ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವದ ಅನುಮತಿ ಹಾಗೂ ಇತರೆ ಸೇವೆಗಳಿಗಾಗಿ ತಾಲೂಕು ಆಡಳಿತದಿಂದ ಏಕಗವಾಕ್ಷಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ವೃತ್ತ ನಿರೀಕ್ಷಕ (ಸಿಪಿಐ) ಗೌಡಪ್ಪ ಗೌಡರ್ ಮಾತನಾಡಿ, ಕೋಮು ಸೌಹಾರ್ದ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ. ಡಿಜೆ ಸೌಂಡ್ ಬಾಕ್ಸ್ ಬಳಕೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಸಾಮರಸ್ಯದ ಸಂದೇಶ ಸಾರಿದರು. ತಾಲೂಕು ಪಂಚಾಯಿತಿ ಇಒ ನರೇಂದ್ರಕುಮಾರ್, ಪಿಎಸ್ಐ ರಾಜು ರೆಡ್ಡಿ, ಮೆಸ್ಕಾಂ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂ ರಾಷ್ಟ್ರ ಸೇನೆಯ ಅಧ್ಯಕ್ಷ ಸುಧೀಂದ್ರ ಪೂಜಾರಿ, ಮಸೀದಿ ಸಮಿತಿಯ ಹಸನಬ್ಬ ಬ್ಯಾರಿ, ಆರ್.ಎ. ಚಾಬುಸಾಬ್, ಟಿ.ಆರ್. ಕೃಷ್ಣಪ್ಪ, ಆರ್. ರಾಘವೇಂದ್ರ, ಹೆಚ್.ಶ್ರೀನಿವಾಸ್ ಆಚಾರ್,ಸೇರಿದಂತೆ ಠಾಣಾ ವ್ಯಾಪ್ತಿಯ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

















Leave a Reply