ಸಾಗರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅತ್ತೆಯ ಮಗಳನ್ನು ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಸೊರಬ ತಾಲೂಕಿನ ಸಮನವಳ್ಳಿ ಗ್ರಾಮದ ಮಂಜುನಾಥ್ ಅಲಿಯಾಸ್ ಮಂಜು ಆನಂದಪ್ಪ ಎಂಬಾತನಿಗೆ ಸಾಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದೆ.
2020ರ ಆಗಸ್ಟ್ 25ರಂದು, ಮೃತ ರಾಜೇಶ್ವರಿ ಅವರು ತಮ್ಮ ಅಜ್ಜಿಯ ಹೆಸರಿನಲ್ಲಿದ್ದ ಸಮನವಳ್ಳಿಯ ಜಾಗಕ್ಕೆ ಬೇಲಿ ಹಾಕಲು ಮುಂದಾಗಿದ್ದರು. ಈ ವೇಳೆ ಜಾಗದ ಮೇಲೆ ನಿಮ್ಮ ಕುಟುಂಬಕ್ಕೆ ಯಾವುದೇ ಹಕ್ಕಿಲ್ಲ ಎಂದು ಆರೋಪಿತ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ವಾಗ್ವಾದ ಹಾಗೂ ಘರ್ಷಣೆ ನಡೆದಿದೆ.
ಘರ್ಷಣೆಯ ವೇಳೆ ಮಂಜುನಾಥ್ ಕತ್ತಿಯಿಂದ ರಾಜೇಶ್ವರಿ ಅವರ ತಲೆಗೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಕುರಿತು ರಾಜೇಶ್ವರಿ ಅವರ ತಾಯಿ ದಾಕ್ಷಾಯಣಮ್ಮ ಅವರು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಆನವಟ್ಟಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಾಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಆರ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಜುನಾಥ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ ವಾದ ಮಂಡಿಸಿದ್ದರು.















Leave a Reply