ಕನ್ನಡಬಲ್ಲ ಸಿಬ್ಬಂದಿ ನೇಮಕ, ರೈತರಿಗೆ ಸಮರ್ಪಕ ಸೇವೆ ಹಾಗೂ ಹಿಂದಿ ಹೇರಿಕೆ ನಿಲ್ಲಿಸುವಂತೆ ಮಲೆನಾಡು ಕನ್ನಡಿಗರ ಸೇನೆ ಒತ್ತಾಯ
ರಿಪ್ಪನ್‌ಪೇಟೆ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಕನ್ನಡದಲ್ಲಿಯೇ ಸೇವೆ ಒದಗಿಸಬೇಕು ಹಾಗೂ ಕನ್ನಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ಮಲೆನಾಡು ಕನ್ನಡಿಗರ ಸೇನೆ (ದೂನ) ಹಾಗೂ ಸಾರ್ವಜನಿಕರು ಸೋಮವಾರ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಲೆನಾಡು ಕನ್ನಡಿಗರ ಸೇನೆಯ ಅಧ್ಯಕ್ಷ ಚಿರಂತ್ ಭಂಡಾರಿ, ಕರ್ನಾಟಕದಲ್ಲೇ ಕನ್ನಡಿಗರು ಅನ್ಯಭಾಷೆ ಕಲಿತು ಸರ್ಕಾರಿ ಸೇವೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಗ್ರಾಹಕರಿಗೆ ಅವರ ಮಾತೃಭಾಷೆಯಲ್ಲಿಯೇ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್‌ನಲ್ಲಿ ಕನ್ನಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಬೇಕು ಅಥವಾ ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ಸಿದ್ದೇಶ್ ಭಂಡಾರಿ ಮಾತನಾಡಿ, ಬ್ಯಾಂಕ್‌ಗೆ ಆಗಮಿಸುವ ರೈತರು ಹಾಗೂ ನಿರುದ್ಯೋಗಿಗಳಿಗೆ ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಸಮಸ್ಯೆಗಳ ಬಗ್ಗೆ ಕೇಳಿದಾಗ ಹಿಂದಿ ಕಲಿತು ಬರುವಂತೆ ಹೇಳಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ಡಿ. ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಬ್ಯಾಂಕ್ ವಿಫಲವಾಗಿದೆ ಎಂದು ಆರೋಪಿಸಿ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕನ್ನಡಪರ ಹೋರಾಟಗಾರ ನಿರಂಜನ್ ಮಾತನಾಡಿ, ಕನ್ನಡ ಭಾಷೆಯ ಉಳಿವು ಮತ್ತು ಹಕ್ಕುಗಳಿಗಾಗಿ ಮಲೆನಾಡು ಕನ್ನಡಿಗರ ಸೇನೆ ನಡೆಸುತ್ತಿರುವ ಹೋರಾಟ ಶ್ಲಾಘನೀಯ. ಕೇವಲ ನವೆಂಬರ್ ತಿಂಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಜನರ ಸಮಸ್ಯೆಗಳ ಪರವಾಗಿ ಧ್ವನಿಯಾಗುತ್ತಿರುವುದು ಏಕೈಕ ಸ್ಥಳೀಯ ಸಂಘಟನೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ರಾಜು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ರೈತರು ಹಾಗೂ ಹಿರಿಯ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ನಾಳೆಯಿಂದಲೇ ಬ್ಯಾಂಕ್ ಹೊರಭಾಗದಲ್ಲಿ ವ್ಯವಹಾರ ವರದಿಗಾರ(BC)ರನ್ನು ನಿಯೋಜಿಸಲಾಗುವುದು. ಬ್ಯಾಂಕಿನೊಳಗೆ ಕನ್ನಡ ನಾಮಫಲಕಗಳನ್ನು ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿಗೆ ಕನ್ನಡ ಭಾಷೆಯ ಅರಿವು ಮತ್ತು ಬಳಕೆಗೆ ಅಗತ್ಯ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಲೆನಾಡು ಕನ್ನಡಿಗರ ಸೇನೆಯ ಉಪಾಧ್ಯಕ್ಷ ನಂದೀಶ್, ಕಿರಣ್, ಮನು, ಆದರ್ಶ, ವಿಕಾಸ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.














Leave a Reply