ರಿಪ್ಪನ್ ಪೇಟೆ : ಐಷರಾಮಿ ಇನ್ನೋವಾ ಕಾರನ್ನು ಬಳಸಿಕೊಂಡು ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ರಿಪ್ಪನ್ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾದ ಕೇವಲ 15 ದಿನಗಳಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಜುಲೈ 3, 2026ರ ರಾತ್ರಿ ರಿಪ್ಪನ್ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಸ್ವಾತಂತ್ರ್ಯವೀರ ಸಾವರ್ಕರ್ ರಸ್ತೆಯಲ್ಲಿ ಗೊವೊಂದನ್ನು ಇನ್ನೋವಾ ಕಾರಿನಲ್ಲಿ ಬಂದು ಕಳವು ಮಾಡಲಾಗಿತ್ತು. ಐಷರಾಮಿ ವಾಹನದಲ್ಲಿ ಬಂದಿದ್ದರಿಂದ ಸ್ಥಳೀಯರಿಗೆ ಯಾವುದೇ ಅನುಮಾನ ಮೂಡಿರಲಿಲ್ಲ. ಘಟನೆಗೆ ಕುರಿತು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಮುಖಂಡರಾದ ದೇವರಾಜ್ ಕೆರೆಹಳ್ಳಿ ಅವರು ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಬಳಿಕ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಪಿಎಸ್ಐ ರಾಜು ರೆಡ್ಡಿ ಅವರ ನೇತೃತ್ವದ ತಂಡವು ಸತತ ತನಿಖೆ ನಡೆಸಿ, ಪ್ರಕರಣ ನಡೆದ 15 ದಿನಗಳಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಹಳೆ ಮಂಡ್ಲಿ ನಿವಾಸಿಗಳಾದ ಅಮೀರ್ ಸುಹೇಲ್ (26) ಹಾಗೂ ಮಹಮ್ಮದ್ ಇಸ್ರಾರ್ ಉಲ್ಲಾ ಖಾನ್ (20) ಎಂದು ಗುರುತಿಸಲಾಗಿದೆ. ಆರೋಪಿಗಳು ಬಳಸಿದ್ದ ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ , ಅಶೋಕ್, ವಿಶ್ವನಾಥ್, ಪರಮೇಶ್ವರಪ್ಪ ಹಾಗೂ ಅವಿನಾಶ್ ತನಿಖೆಯಲ್ಲಿ ಪಾಲ್ಗೊಂಡಿದ್ದರು.ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ರಿಂದ ಮೆಚ್ಚುಗೆ ವ್ಯಕ್ತವಾಗಿದೆ .
















Leave a Reply