ಶಿವಮೊಗ್ಗ: ನಗರದ ವಿದ್ಯಾನಗರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ದಂಪತಿಯ ಬಾಡಿಗೆ ಮನೆಯಲ್ಲಿ ಹಾಡಹಗಲೇ ನಡೆದ ಭಾರಿ ಕಳ್ಳತನ ಪ್ರಕರಣ ಸಂಚಲನ ಮೂಡಿಸಿದೆ. ಕೇವಲ 30 ನಿಮಿಷಗಳಲ್ಲಿ 1.42 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ದುಬಾರಿ ವಾಚ್ಗಳು ಹಾಗೂ ನಗದನ್ನು ದೋಚಿ ಕಳ್ಳ ಪರಾರಿಯಾಗಿದ್ದಾನೆ.
ಏನಾಯಿತು?
ಆ. 28ರಂದು ಪಿಡಿಒ ದಂಪತಿ ಕರ್ತವ್ಯ ನಿಮಿತ್ತ ಕಚೇರಿಗೆ ತೆರಳಿದ್ದ ವೇಳೆ, ಮನೆಯ ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳ ಬೀಗ ಮುರಿದು ಮನೆಯೊಳಗೆ ನುಗ್ಗಿದ್ದಾನೆ. ಅರ್ಧ ಗಂಟೆಯಲ್ಲೇ ಅಮೂಲ್ಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ.
ಕಳುವಾದ ವಸ್ತುಗಳು:
* 943 ಗ್ರಾಂ ಚಿನ್ನಾಭರಣ
* 500 ಗ್ರಾಂ ಬೆಳ್ಳಿ ವಸ್ತುಗಳು
* 15 ದುಬಾರಿ ವಾಚ್ಗಳು (ಸುಮಾರು ₹1.5 ಲಕ್ಷ)
* ₹86,000 ನಗದು
* ಒಟ್ಟು ಮೌಲ್ಯ: ₹1,42,29,900
ದಂಪತಿಯ ಮಗಳು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಖದೀಮ:
ಮನೆಯತ್ತ ಆಗಮಿಸುವುದು, ಬೀಗ ಮುರಿದು ಒಳನುಗ್ಗುವುದು ಹಾಗೂ ಕೃತ್ಯ ಎಸಗಿ ಪರಾರಿಯಾಗುವ ಸಂಪೂರ್ಣ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

















Leave a Reply