ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ಹೇಳಿ ₹15 ಲಕ್ಷ ಹಣ ಪಡೆದು ವಂಚನೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಹಂಚಿ ಅವರಿಗೆ, ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಯವರ ಪಿಎ ಎಂದು ಪರಿಚಯಿಸಿಕೊಂಡು ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ₹15 ಲಕ್ಷ ಪಡೆದು ವಂಚಿಸಿರುವ ಕುರಿತು ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 504/2026ರಡಿ ಬಿಎನ್‌ಎಸ್ ಕಲಂ 318(4) ಅನ್ವಯ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. (ಐಪಿಎಸ್), ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎ.ಜಿ. ಕಾರಿಯಪ್ಪ ಹಾಗೂ ಶಿವಮೊಗ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶೀಲವಂತ ಹೊಸಮನಿ ಅವರ ಮಾರ್ಗದರ್ಶನದಲ್ಲಿ, ತುಂಗಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್, ಪಿಎಸ್‌ಐ ಮಂಜಮ್ಮ ಹಾಗೂ ಸಿಬ್ಬಂದಿಗಳಾದ ಶೋಭಾರಾಣಿ, ನಾಗರಾಜ, ಹರೀಶ್ ನಾಯ್ಕ, ನಿತಿನ್ ಮತ್ತು ತಮ್ಮಣ್ಣ ಜಂಬಗಿ ಅವರನ್ನೊಳಗೊಂಡ ತಂಡ ತನಿಖೆ ನಡೆಸಿತು.
ತನಿಖೆಯ ವೇಳೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚಿಕ್ಕ ಅಂಗಳ ಗ್ರಾಮದ ರಸ್ತೆಯ ಬಳಿ ಆರೋಪಿಯಾದ ಹೇಮಂತ್ ಕುಮಾರ್ @ ಗಣೇಶ್ (30), ಶರಾವತಿನಗರ, ಶಿವಮೊಗ್ಗ ನಿವಾಸಿಯನ್ನು ಜುಲೈ 29ರಂದು ವಶಕ್ಕೆ ಪಡೆದು ಬಂಧಿಸಲಾಯಿತು.ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
















Leave a Reply