ವೆಜ್ ಆರ್ಡರ್, ನಾನ್‌ವೆಜ್ ಡೆಲಿವರಿ; ಶಿವಮೊಗ್ಗದ ಈ ಪ್ರಕರಣದಲ್ಲಿ ಗ್ರಾಹಕರಿಗೆ ಜಯ

Add a heading 20260715 220456 0000 ವೆಜ್ ಆರ್ಡರ್, ನಾನ್‌ವೆಜ್ ಡೆಲಿವರಿ; ಶಿವಮೊಗ್ಗದ ಈ ಪ್ರಕರಣದಲ್ಲಿ ಗ್ರಾಹಕರಿಗೆ ಜಯ
Spread the love
img 20260110 wa0000790239124223008672 ವೆಜ್ ಆರ್ಡರ್, ನಾನ್‌ವೆಜ್ ಡೆಲಿವರಿ; ಶಿವಮೊಗ್ಗದ ಈ ಪ್ರಕರಣದಲ್ಲಿ ಗ್ರಾಹಕರಿಗೆ ಜಯ

ಶಿವಮೊಗ್ಗ: ಣೇಶ ಚತುರ್ಥಿ ಹಬ್ಬದ ದಿನ ವೆಜ್ ಬರ್ಗರ್ ಆರ್ಡರ್ ಮಾಡಿದ ಗ್ರಾಹಕರಿಗೆ ನಾನ್‌ವೆಜ್ ಬರ್ಗರ್ ತಲುಪಿಸಿದ ಪ್ರಕರಣದಲ್ಲಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಜೋಮೊ*ಟೊ ಫುಡ್ ಡೆಲಿವರಿ ಸಂಸ್ಥೆ ಹಾಗೂ ಹೋಟೆಲ್ ವಿರುದ್ಧ ಮಹತ್ವದ ಆದೇಶ ನೀಡಿದೆ.

2025ರ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬದ ದಿನ ಶಿವಮೊಗ್ಗದ ನಿವಾಸಿ ನಂದೀಶ್ ಅವರು ಆ ಖಾಸಗಿ ಫುಡ್ ಡೆಲಿವರಿ ಆ್ಯಪ್ ಮೂಲಕ ₹313.15 ಪಾವತಿಸಿ ವೆಜ್ ಬರ್ಗರ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ನಾನ್‌ವೆಜ್ ಬರ್ಗರ್ ತಲುಪಿಸಲಾಗಿತ್ತು. ಈ ಕುರಿತು ಅವರು ತಕ್ಷಣವೇ ಆ್ಯಪ್‌ನಲ್ಲಿ ದೂರು ದಾಖಲಿಸಿದಾಗ, ಸಂಸ್ಥೆಯು ಆರ್ಡರ್ ಮೊತ್ತವನ್ನು ಹಿಂದಿರುಗಿಸಿತ್ತು.

ಆದರೆ, ಪವಿತ್ರ ಗಣೇಶ ಹಬ್ಬದ ಸಂದರ್ಭದಲ್ಲಿ ಮನೆಯೊಳಗೆ ಮಾಂಸಾಹಾರಿ ಆಹಾರ ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ನಂದೀಶ್ ಆರೋಪಿಸಿ, ತಮ್ಮ ವಕೀಲರ ಮೂಲಕ ಫುಡ್ ಡೆಲಿವರಿ ಸಂಸ್ಥೆಯ ಸಿಇಒ (ಗುರಗಾಂವ್), ಜೋನಲ್ ಹೆಡ್ (ಬೆಂಗಳೂರು) ಹಾಗೂ ಸಂಬಂಧಿತ ಹೋಟೆಲ್ ಮಾಲೀಕರ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ವೇಳೆ ಫುಡ್ ಡೆಲಿವರಿ ಸಂಸ್ಥೆಯು ತಾವು ಕೇವಲ ಆನ್‌ಲೈನ್ ವೇದಿಕೆಯಾಗಿದ್ದು, ಗ್ರಾಹಕರು ನೇರವಾಗಿ ಹೋಟೆಲ್‌ಗೆ ಆರ್ಡರ್ ಮಾಡಿರುವುದರಿಂದ ತಮ್ಮ ವಿರುದ್ಧ ಯಾವುದೇ ಸೇವಾನ್ಯೂನತೆ ಇಲ್ಲ ಎಂದು ವಾದ ಮಂಡಿಸಿತು.

ಆದರೆ, ದೂರುದಾರರು ಸಲ್ಲಿಸಿದ ದಾಖಲೆಗಳು, ಪ್ರಮಾಣಪತ್ರಗಳು ಹಾಗೂ ಎರಡೂ ಪಕ್ಷಗಳ ವಾದವನ್ನು ಪರಿಶೀಲಿಸಿದ ಆಯೋಗವು, ಎದುರುದಾರರಿಂದ ಸೇವಾನ್ಯೂನತೆ ನಡೆದಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಉಂಟಾದ ಮಾನಸಿಕ ಹಿಂಸೆ ಹಾಗೂ ಸೇವಾನ್ಯೂನತೆಗೆ ಪರಿಹಾರವಾಗಿ ಫುಡ್ ಡೆಲಿವರಿ ಸಂಸ್ಥೆಯ ಸಿಇಒ, ಜೋನಲ್ ಹೆಡ್ ಮತ್ತು ಸಂಬಂಧಿತ ಹೋಟೆಲ್ ಮಾಲೀಕರು ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ ದೂರುದಾರರಿಗೆ ₹10,000 ಪರಿಹಾರ ಮತ್ತು ಪ್ರಕರಣದ ಕಾನೂನು ವೆಚ್ಚಕ್ಕಾಗಿ ಹೆಚ್ಚುವರಿಯಾಗಿ ₹10,000 ಸೇರಿದಂತೆ ಒಟ್ಟು ₹20,000 ಅನ್ನು ಆದೇಶ ಪ್ರಕಟಿಸಿದ 45 ದಿನಗಳೊಳಗೆ ಪಾವತಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನು ಒಳಗೊಂಡ ಪೀಠವು ಜುಲೈ 9ರಂದು ಈ ಆದೇಶ ಪ್ರಕಟಿಸಿದೆ.

Leave a Reply

Your email address will not be published. Required fields are marked *