ಶಿವಮೊಗ್ಗ: ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಲಿದೆ ಎಂಬ ಸುದ್ದಿ ಹರಡಿದಾಗ ರೈತರು ತಮ್ಮ ಭೂಮಿ ಹಾಗೂ ನೆಲೆ ಕಳೆದುಕೊಳ್ಳುವ ಭೀತಿಯಿಂದ ತೀವ್ರ ಹೋರಾಟ ನಡೆಸಿದ್ದರು. ಆ ಹೋರಾಟದಲ್ಲಿ ತಾವೂ ಭಾಗವಹಿಸಿದ್ದಾಗಿ ಹೇಳಿದರು.

ಈ ಕುರಿತು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಇದಕ್ಕೆ ಸ್ಪಂದಿಸಿ, ಕರ್ನಾಟಕದ ಯಾವುದೇ ಭಾಗದಲ್ಲೂ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ನಿರ್ಧರಿಸಿದೆ. ಬೇಸೂರು ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೂ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ಬೇಸೂರು ಗ್ರಾಮದ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ವ್ಯಕ್ತಪಡಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಹೊಸದಾಗಿ ಜಲಾಶಯ ನಿರ್ಮಾಣ ಮಾಡುವುದಿಲ್ಲ. ಈಗಿರುವ ನೀರಿನ ಸಂಪನ್ಮೂಲ ಬಳಸಿಕೊಂಡೇ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ಇರುವುದರಿಂದ ಯೋಜನೆ ಮುಂದುವರೆಯಲಿದೆ. ಪರಿಸರಕ್ಕೆ ಹಾನಿಯಾಗದಂತೆ ಅಗತ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಪರ್ಯಾಯ ಅರಣ್ಯ ಪ್ರದೇಶ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಹುಲ್ತಿಕೊಪ್ಪ ಶ್ರೀಧರ್ ಹಾಗೂ ರಮೇಶ್ ಶಂಕರಘಟ್ಟ ಉಪಸ್ಥಿತರಿದ್ದರು.















Leave a Reply