“ನ್ಯಾಯಕ್ಕಾಗಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಮಹಿಳೆಯ ಪ್ರತಿಭಟನೆ”

Blue and Red Voter Education Banner 20260414 212653 0000 scaled “ನ್ಯಾಯಕ್ಕಾಗಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಮಹಿಳೆಯ ಪ್ರತಿಭಟನೆ”
Spread the love

ರಿಪ್ಪನ್‌ಪೇಟೆ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ದಿನವೇ ನ್ಯಾಯಕ್ಕಾಗಿ ಮಹಿಳೆಯೊಬ್ಬರು ಠಾಣೆ ಎದುರು ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದ ಘಟನೆ ಗಮನ ಸೆಳೆಯಿತು.
ರಿಪ್ಪನ್‌ಪೇಟೆ ಸಮೀಪದ ಗವಟೂರು ಗ್ರಾಮದ ನವ್ಯ ದೇವರಾಜ್, ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು “ನ್ಯಾಯ ಬೇಕು” ಎಂಬ ಒತ್ತಾಯದೊಂದಿಗೆ ಪೊಲೀಸ್ ಠಾಣೆ ಮುಂದೆ  ಪ್ರತಿಭಟನೆ ನಡೆಸಿದರು. ಈ ಮೂಲಕ ತಮ್ಮ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯವನ್ನು ಸಾರ್ವಜನಿಕ ಗಮನಕ್ಕೆ ತಂದರು.

img 20260414 wa00407147055020739732070 “ನ್ಯಾಯಕ್ಕಾಗಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಮಹಿಳೆಯ ಪ್ರತಿಭಟನೆ”

ನವ್ಯ ದೇವರಾಜ್ ಅವರ ಪ್ರಕಾರ, ಕೆರೆಹಳ್ಳಿ ಹೋಬಳಿಯ ಗವಟೂರು ಗ್ರಾಮದ ಸರ್ವೇ ನಂ.101ರಲ್ಲಿ ಪರಿಶಿಷ್ಟ ಜನಾಂಗದ ಭೀಮಣ್ಣ ಬಿನ್ ಪುಟ್ಟಪ್ಪ ಅವರಿಗೆ ಸರ್ಕಾರದಿಂದ ಮಂಜೂರಾದ ದರಖಾಸು ಜಮೀನನ್ನು ಕೆಲ ಮೇಲ್ವರ್ಗದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಹಕ್ಕುಪತ್ರ ಇದ್ದರೂ ಜಾಗವನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಆರೋಪ.
ಈ ಕುರಿತು ಹಲವು ಬಾರಿ ಪೊಲೀಸರಿಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ಸರ್ವೇ ಇಲಾಖೆಯಿಂದ ಜಮೀನಿನ ನಿಖರ ಅಳತೆ ಮಾಡಿಸಿದರೆ ಸತ್ಯ ಹೊರಬರುತ್ತದೆ. ನಮಗೆ ನಮ್ಮ ಹಕ್ಕಿನ ಜಮೀನು ಬೇಕು,” ಎಂದು ಅವರು ಮನವಿ ಮಾಡಿಕೊಂಡರು.

ಘಟನೆಯ ಮಾಹಿತಿ ತಿಳಿದ ಬಳಿಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮಹಿಳೆಗೆ ಬೆಂಬಲ ಸೂಚಿಸಿದರು. ಬಳಿಕ ಪಿಎಸ್‌ಐ ರಾಜು ರೆಡ್ಡಿ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ, ನವ್ಯ ಅವರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಈ ಘಟನೆ ಅಂಬೇಡ್ಕರ್ ಜಯಂತಿಯ ದಿನವೇ ನಡೆದಿರುವುದು, ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ ಇನ್ನೂ ಮುಂದುವರಿಯುತ್ತಿದೆ ಎಂಬುದನ್ನು ಮತ್ತೆ ಒತ್ತಿ ಹೇಳುವಂತಾಗಿದೆ.

Leave a Reply

Your email address will not be published. Required fields are marked *