
ಶಿವಮೊಗ್ಗ : ಪ್ರಭುಲಿಂಗ ಕವಳಿಕಟ್ಟಿ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ಕೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ ಹಂತವಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯನ್ನು ದೋಷರಹಿತವಾಗಿಸುವುದು ಹಾಗೂ 18 ವರ್ಷ ಪೂರ್ಣಗೊಳಿಸಿದ ಪ್ರತಿಯೊಬ್ಬ ಅರ್ಹ ಯುವ ಮತದಾರರನ್ನು ಪಟ್ಟಿಗೆ ಸೇರಿಸುವುದು ಈ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಹೊಸದಾಗಿ ಹೆಸರು ಸೇರಿಸಲು, ತಿದ್ದುಪಡಿ ಮಾಡಿಸಲು ಅಥವಾ ಹೆಸರು ತೆಗೆದುಹಾಕಲು ಇದು ಉತ್ತಮ ಅವಕಾಶವಾಗಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜೂನ್ 20ರಿಂದ 29ರವರೆಗೆ ಸಿದ್ಧತಾ ಕಾರ್ಯಗಳು ನಡೆಯಲಿದ್ದು, ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿ ಹಾಗೂ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ 2002ರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುತ್ತದೆ. ಬಿಎಲ್‌ಒಗಳು ಪ್ರತಿ ಮನೆಗೆ ಎರಡು ನಮೂನೆಗಳನ್ನು ನೀಡಿ, ಅಗತ್ಯ ಮಾಹಿತಿಯನ್ನು ಪಡೆದು ಅದರ ಒಂದು ಪ್ರತಿಯನ್ನು ಸಹಿ ಮಾಡಿ ಮತದಾರರಿಗೆ ಹಿಂದಿರುಗಿಸಲಿದ್ದಾರೆ. ಚುನಾವಣಾ ಆಯೋಗ ಸೂಚಿಸಿರುವ 12 ವಿಧದ ದಾಖಲೆಗಳಲ್ಲಿ ಯಾವುದಾದರೊಂದು ಪುರಾವೆ ಸಲ್ಲಿಸಬೇಕಾಗುತ್ತದೆ ಎಂದರು.
ಆಗಸ್ಟ್ 05ರಂದು ಮತದಾರರ ಪಟ್ಟಿಯ ಕರಡು ಪ್ರಕಟಿಸಲಾಗುವುದು. ಸೆಪ್ಟೆಂಬರ್ 04ರವರೆಗೆ ಆಕ್ಷೇಪಣೆ ಹಾಗೂ ಅಹವಾಲು ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 03ರೊಳಗೆ ಅವುಗಳನ್ನು ಇತ್ಯರ್ಥಗೊಳಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 10ರಂದು ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 1793 ಬೂತ್ ಮಟ್ಟದ ಅಧಿಕಾರಿಗಳು ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, 01.06.2026ರಂತೆ ಜಿಲ್ಲೆಯ 15,26,829 ಮತದಾರರನ್ನು ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಒಳಪಡಿಸಲಾಗಿದೆ ಎಂದರು.
ಸಭೆಯಲ್ಲಿ ಅಭಿಷೇಕ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

















Leave a Reply