
ಶಿವಮೊಗ್ಗ :ಕಾಂಗ್ರೆಸ್ ಸರ್ಕಾರವು ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಸಾಧನಾ ಸಮಾವೇಶ’ವು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹ ಮತ್ತು ಪ್ರಜಾಪ್ರಭುತ್ವದ ಅಣಕವಾಗಿದೆ. ಈ ಸರ್ಕಾರದ ಮೂರು ವರ್ಷಗಳ ಆಡಳಿತ ಕೇವಲ ಭ್ರಷ್ಟಾಚಾರ, ಅಕ್ರಮ ಮತ್ತು ಜನರ ಬಗ್ಗೆ ನಿಷ್ಕಾಳಜಿಗೆ ಸೀಮಿತವಾಗಿದ್ದು, ಸಾಧನೆಯಲ್ಲಿ ಶೂನ್ಯ ಹಾಗೂ ಲೂಟಿಯಲ್ಲಿ ಅಗ್ರಗಣ್ಯವಾಗಿದೆ. ದೂರದೃಷ್ಟಿಯಿಲ್ಲದ ಹಣಕಾಸು ನಿರ್ವಹಣೆಯಿಂದಾಗಿ ರಾಜ್ಯದ ಬೊಕ್ಕಸ ಸಂಪೂರ್ಣವಾಗಿ ತಳಕಂಡಿದ್ದು, ಅಭಿವೃದ್ಧಿ ಕೇವಲ ಕಾಗದದ ಮೇಲಿದ್ದರೆ ಜನರ ಬದುಕು ಮಾತ್ರ ಕತ್ತಲಿಗೆ ತಳ್ಳಲ್ಪಟ್ಟಿದೆ. ಜನರ ನೈಜ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ ಆಡಳಿತ ಪಕ್ಷದ ನಾಯಕರಿಗೆ ಅಧಿಕಾರ ಮತ್ತು ಕುರ್ಚಿಗಾಗಿ ನಡೆಯುತ್ತಿರುವ ಜಾಗತಿಕ ಮಟ್ಟದ ಬೀದಿ ಕಿತ್ತಾಟವೇ ಮುಖ್ಯವಾಗಿದೆ. ಇಡೀ ಆಡಳಿತ ವ್ಯವಸ್ಥೆ ಕುಂಟುತ್ತಾ, ತೆವಳುತ್ತಾ ಕುರ್ಚಿ ಉಳಿಸಿಕೊಳ್ಳುವ ಕುಸ್ತಿಯಲ್ಲಿ ಮುಳುಗಿದ್ದು, ರಾಜ್ಯದ ಪ್ರಗತಿ ಸಂಪೂರ್ಣ ಸ್ಥಗಿತಗೊಂಡಿದೆ ಶಾಸಕ ಎಸ್ ಎನ್ ಚನ್ನಬಸಪ್ಪ ಕಿಡಿಕಾರಿದರು.

ರಾಜಧಾನಿಯ ಸ್ಥಿತಿಯಂತೂ ಭ್ರಷ್ಟಾಚಾರದ ಮಿತಿಮೀರಿದ ವೇಗಕ್ಕೆ ಸಾಕ್ಷಿಯಾಗಿದೆ. ಸಣ್ಣ ಪ್ರಮಾಣದ ಮಳೆಗೂ ತತ್ತರಿಸುತ್ತಿರುವ ಬೆಂಗಳೂರು ಇಂದು ಕೆರೆಗಳ ನಗರಿಯಾಗಿ ಮಾರ್ಪಟ್ಟಿದ್ದು, ಹೊಂಡ-ಗುಂಡಿಗಳ ರಸ್ತೆಗಳು ಸರ್ಕಾರದ ‘ಬ್ರ್ಯಾಂಡ್ ಬೆಂಗಳೂರು’ ಘೋಷಣೆಯನ್ನು ಅಣಕಿಸುತ್ತಿವೆ. ಇನ್ನು ರಾಜ್ಯದಾದ್ಯಂತ ಸಾಂಸ್ಥಿಕ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮುಡಾ, ಕೆಪಿಎಸ್ಸಿ ಹಾಗೂ ಕೆಐಎಡಿಬಿ ಹಗರಣಗಳು ಸರ್ಕಾರದ ವ್ಯವಸ್ಥಿತ ಲೂಟಿಯನ್ನು ಬಯಲು ಮಾಡಿವೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿಗಳನ್ನು ಅಧಿಕೃತ ಬ್ಯಾಂಕ್ ಖಾತೆಗಳ ಮೂಲಕವೇ ದುರ್ಬಳಕೆ ಮಾಡಿಕೊಂಡಿರುವುದು ಶೋಷಿತ ಸಮಾಜಕ್ಕೆ ಇಡೀ ಸರ್ಕಾರವೇ ಬಗೆದ ದೊಡ್ಡ ದ್ರೋಹವಾಗಿದೆ. ಇದರೊಂದಿಗೆ ಒಳ ಮೀಸಲಾತಿಯ ಸೂಕ್ಷ್ಮ ವಿಷಯವನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿ ಸಮುದಾಯಗಳ ನಡುವೆ ವೈಷಮ್ಯ ಸೃಷ್ಟಿಸಿ, ಈ ಹಿಂದೆ ಇದ್ದ ಹೆಚ್ಚುವರಿ ಮೀಸಲಾತಿಯನ್ನು ಕಡಿತಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ.

ಇದೇ ವೇಳೆ, ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ‘ಪಂಜಾಬ್’ ಮಾದರಿಯಲ್ಲಿ ರಾಜ್ಯದೆಲ್ಲೆಡೆ ಡ್ರಗ್ಸ್ ಹಾವಳಿ ಮಿತಿಮೀರುತ್ತಿದ್ದರೂ ಇಡೀ ಸರ್ಕಾರಿ ವ್ಯವಸ್ಥೆ ಮಾತ್ರ ಮೂಕಪ್ರೇಕ್ಷಕನಾಗಿದೆ. ಕೃಷಿ ವಲಯವನ್ನು ಕಡೆಗಣಿಸಿರುವ ಈ ಆಡಳಿತವು ಕಬ್ಬು ಮತ್ತು ಭತ್ತದ ಬೆಳೆಗಾರರಿಗೆ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು (MSP) ತಲುಪಿಸುವಲ್ಲಿ ವಿಫಲವಾಗಿ, ಅನ್ನದಾತರನ್ನು ತಿಂಗಳುಗಳ ಕಾಲ ಬೀದಿಯಲ್ಲಿ ನಿಲ್ಲಿಸಿ ಕಣ್ಣೀರು ಹಾಕಿಸಿದೆ. ಇನ್ನು ಬೌರಿಂಗ್ ಆಸ್ಪತ್ರೆಯ ನಿರ್ವಹಣಾ ವೈಫಲ್ಯದಿಂದಾಗಿ ಏಳು ಅಮಾಯಕರು ಪ್ರಾಣ ಕಳೆದುಕೊಂಡರೆ, ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ನೂರಾರು ನವಜಾತ ಶಿಶುಗಳ ಸಾವು ಸಂಭವಿಸಿದರೂ ಇಡೀ ಆರೋಗ್ಯ ಇಲಾಖೆ ನಿರ್ಲಜ್ಜ ಮೌನಕ್ಕೆ ಶರಣಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಔಷಧಗಳು ಮತ್ತು ಡಯಾಲಿಸಿಸ್ ಸೇವೆಗಳಿಲ್ಲದೆ ಬಡ ರೋಗಿಗಳು ಸಾಯುತ್ತಿದ್ದಾರೆ. ಗುತ್ತಿಗೆದಾರರಿಂದ ಬರೋಬ್ಬರಿ 60% ಕಮಿಷನ್ ದಂಧೆ ನಡೆಸಿ ಪ್ರಾಮಾಣಿಕರನ್ನು ಆತ್ಮಹತ್ಯೆಯ ಹಾದಿಗೆ ತಳ್ಳಿರುವ ಈ ಭ್ರಷ್ಟ ಆಡಳಿತಕ್ಕೆ ಕನಿಷ್ಠ ನೈತಿಕ ಜವಾಬ್ದಾರಿ ಇದ್ದರೆ, ಈ ‘ವೈಫಲ್ಯದ ಸಮಾವೇಶ’ವನ್ನು ಮಾಡುವ ಬದಲು ರಾಜ್ಯದ ಹಿತಾಸಕ್ತಿಗಾಗಿ ತಕ್ಷಣವೇ ಅಧಿಕಾರದಿಂದ ಕೆಳಗಿಳಿದು ಜನತೆಯ ಕ್ಷಮೆಯಾಚಿಸಬೇಕು ಅಥವಾ ಈ ಕೂಡಲೇ ಕಣ್ಣಿಗೆ ಮಣ್ಣೆರಚುವ ಪ್ರಚಾರದ ತಂತ್ರಗಳನ್ನು ನಿಲ್ಲಿಸಿ, ಸಂಪೂರ್ಣವಾಗಿ ಹಳ್ಳ ಹಿಡಿದಿರುವ ಆಡಳಿತ ವ್ಯವಸ್ಥೆಯನ್ನು ಹಳಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸಬೇಕು.

ಹೀಗೆ ಆರ್ಥಿಕತೆ, ಕಾನೂನು ಸುವ್ಯವಸ್ಥೆ, ಕೃಷಿ ಮತ್ತು ಆರೋಗ್ಯ ಕ್ಷೇತ್ರ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ಸಂಪೂರ್ಣ ದಿವಾಳಿಯಾಗಿರುವ ಈ ಆಡಳಿತಕ್ಕೆ ಜನಸಾಮಾನ್ಯರ ಕಣ್ಣೀರು ಮತ್ತು ಆಕ್ರೋಶದ ಶಾಪ ತಟ್ಟದೇ ಬಿಡದು. ಜನಹಿತವನ್ನು ಗಾಳಿಗೆ ತೂರಿ, ಕೇವಲ ಭ್ರಷ್ಟಾಚಾರದ ಹಣದಿಂದ ಅಧಿಕಾರದ ಮದವೇರಿ ಆಚರಿಸಿರುವ ಈ ‘ವೈಫಲ್ಯದ ಸಮಾವೇಶ’ವು ಕಾಂಗ್ರೆಸ್ ಸರ್ಕಾರದ ಪತನಕ್ಕೆ ಬರೆಯುತ್ತಿರುವ ಮುನ್ನುಡಿಯಾಗಿದೆ. ನಾಡಿನ ಪ್ರಜ್ಞಾವಂತ ನಾಗರಿಕರು ಇಂತಹ ಜನವಿರೋಧಿ, ಲೂಟಿಕೋರ ಆಡಳಿತವನ್ನು ಇನ್ನು ಎಷ್ಟು ಮಾತ್ರಕ್ಕೂ ಸಹಿಸುವುದಿಲ್ಲ. ಮುಂಬರುವ ಚುನಾವಣಾ ರಣಾಂಗಣದಲ್ಲಿ ರಾಜ್ಯದ ಮತದಾರರು ಚಲಾಯಿಸುವ ಒಂದೊಂದು ಮತವೂ ಈ ಭ್ರಷ್ಟ ಸರ್ಕಾರದ ಅಹಂಕಾರವನ್ನು ಪುಡಿಪುಡಿ ಮಾಡಿ, ದಿವಾಳಿಯಾಗಿರುವ ಕರ್ನಾಟಕವನ್ನು ರಕ್ಷಿಸಲು ಈ ಭ್ರಷ್ಟ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೆಸೆಯುವುದೇ ಜನತೆಯ ಏಕೈಕ ಸಂಕಲ್ಪ ಎಂದು ಶಾಸಕ ಎಸ್ಎನ್ ಚನ್ನಬಸಪ್ಪ ಆಕ್ರೋಶ ಹೊರಹಾಕಿದರು.
















Leave a Reply