
ಬೆಂಗಳೂರು: ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ .ರಾಘವೇಂದ್ರ ನೇತೃತ್ವದ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಕೀಲರ ಸಂಘಗಳ ಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಬೆಂಗಳೂರಿನಲ್ಲಿ ನಡೆದ ಭೇಟಿಯಲ್ಲಿ ಶಿವಮೊಗ್ಗ, ಸಾಗರ ಹಾಗೂ ಶಿಕಾರಿಪುರ ಭಾಗದ ವಕೀಲರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿ, ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾದ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿದರು.
ಶಿವಮೊಗ್ಗವು ಭೌಗೋಳಿಕವಾಗಿ ಅನುಕೂಲಕರ ಸ್ಥಾನದಲ್ಲಿದ್ದು, ಉತ್ತಮ ರಸ್ತೆ ಹಾಗೂ ರೈಲು ಸಂಪರ್ಕ ಹೊಂದಿರುವುದರಿಂದ ನ್ಯಾಯಾಂಗ ಸೇವೆಗಳ ವಿಸ್ತರಣೆಗೆ ಸೂಕ್ತ ಕೇಂದ್ರವಾಗಿದೆ ಎಂದು ನಿಯೋಗವು ಮುಖ್ಯಮಂತ್ರಿ ಗಮನಕ್ಕೆ ತಂದಿತು. ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆಯಾದರೆ ಶಿವಮೊಗ್ಗ ಮಾತ್ರವಲ್ಲದೆ ಚಿಕ್ಕಮಗಳೂರು , ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಲಾಯಿತು.
ಸರ್ಕ್ಯೂಟ್ ಪೀಠ ಸ್ಥಾಪನೆಯಾಗುವವರೆಗೆ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಪ್ರಧಾನ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲಿಯೇ ಮುಂದುವರಿಸಬೇಕು ಎಂದು ಸಂಸದರು ಆಗ್ರಹಿಸಿದರು. ಪಶ್ಚಿಮ ಘಟ್ಟ ಪ್ರದೇಶದ ಭೌಗೋಳಿಕ ಸವಾಲುಗಳು ಮತ್ತು ಮಳೆಗಾಲದ ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಉಲ್ಲೇಖಿಸಿದ ಅವರು, ಶಿವಮೊಗ್ಗವನ್ನು ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸುವುದು ಸಾರ್ವಜನಿಕರಿಗೆ ಹೆಚ್ಚುವರಿ ತೊಂದರೆ ಉಂಟುಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಬೆಳೆ ವಿಮಾ ಪರಿಹಾರ ವೈಪರೀತ್ಯ ಸರಿಪಡಿಸಲು ಒತ್ತಾಯ
ಮುಖ್ಯಮಂತ್ರಿಗಳ ಭೇಟಿಯ ವೇಳೆ ಶಿವಮೊಗ್ಗ ಜಿಲ್ಲೆಯ ರೈತರಿಗೆ ಸಂಬಂಧಿಸಿದ ಬೆಳೆ ವಿಮಾ ಪರಿಹಾರದ ಸಮಸ್ಯೆಯನ್ನೂ ಸಂಸದ ರಾಘವೇಂದ್ರ ಪ್ರಸ್ತಾಪಿಸಿದರು. 2024-25ನೇ ಸಾಲಿನ ಪುನರ್ ರಚಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (R-WBCIS) ಅಡಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ರೈತರಿಗೆ ನೀಡಲಾದ ಪರಿಹಾರದಲ್ಲಿ ಗಂಭೀರ ಅಸಮಾನತೆಗಳು ಕಂಡುಬಂದಿವೆ ಎಂದು ಅವರು ತಿಳಿಸಿದರು. ಮಳೆ ಮಾಪಕಗಳು ಹಾಗೂ ಹವಾಮಾನ ಕೇಂದ್ರಗಳ ತಾಂತ್ರಿಕ ದೋಷಗಳು ಮತ್ತು ಅಸಮರ್ಪಕ ನಿರ್ವಹಣೆಯಿಂದ ಒಂದೇ ರೀತಿಯ ಹವಾಮಾನ ಪರಿಸ್ಥಿತಿ ಎದುರಿಸಿದ ರೈತರಿಗೆ ವಿಭಿನ್ನ ಪ್ರಮಾಣದ ಪರಿಹಾರ ದೊರೆತಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಯಿತು.
ಈ ಕುರಿತು ಶಿವಮೊಗ್ಗ ಜಿಲ್ಲಾಡಳಿತ ಸಲ್ಲಿಸಿರುವ ಪ್ರಸ್ತಾವನೆ ಹಲವು ತಿಂಗಳುಗಳಿಂದ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿದ್ದು, ತಕ್ಷಣ ಕ್ರಮ ಕೈಗೊಂಡು ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಸಂಸದರು ಒತ್ತಾಯಿಸಿದರು.
ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆ ಹಾಗೂ ಬೆಳೆ ವಿಮಾ ಪರಿಹಾರ ಸಮಸ್ಯೆಗಳ ಕುರಿತು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ ಎಂದು ನಿಯೋಗ ತಿಳಿಸಿದೆ.
ಈ ಸಂದರ್ಭದಲ್ಲಿ ಸಂಸದರ ನೇತೃತ್ವದಲ್ಲಿ ಶಿವಮೊಗ್ಗ ನಗರ ಶಾಸಕರಾದ ಚೆನ್ನಬಸಪ್ಪ, ಸಾಗರ – ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಸೇರಿದಂತೆ ನಿಯೋಗವು ಉಪಸ್ಥಿತರಿದ್ದರು.
















Leave a Reply