ರಿಪ್ಪನ್ ಪೇಟೆ: ಬಹುನಿರೀಕ್ಷಿತ 2026ರ ಕರ್ನಾಟಕ ಬಜೆಟ್‌ನಲ್ಲಿ ರಿಪ್ಪನ್ ಪೇಟೆಗೆ ಸಮುದಾಯ ಆಸ್ಪತ್ರೆ ಘೋಷಣೆ ಆಗದ ಹಿನ್ನೆಲೆಯಲ್ಲಿ ಈ ಭಾಗದ ಜನರಲ್ಲಿ ತೀವ್ರ ನಿರಾಸೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ನಿರಂತರವಾಗಿ ಕೇಳಿಬರುತ್ತಿರುವ ಈ ಬೇಡಿಕೆ ಈ ಬಾರಿಯೂ ನಿರ್ಲಕ್ಷ್ಯಕ್ಕೊಳಗಾಗಿದ್ದು, ರಿಪ್ಪನ್ ಪೇಟೆ ಹಾಗೂ ಹೊಸನಗರ ತಾಲೂಕಿನ ಜನರ ನಿರೀಕ್ಷೆಗಳಿಗೆ ಕರ್ನಾಟಕ ಸರ್ಕಾರ ಎಳ್ಳು ನೀರು ಬಿಟ್ಟಿದೆ.
ಸುಮಾರು 7–8 ವರ್ಷಗಳಿಂದ ರಿಪ್ಪನ್ ಪೇಟೆಗೆ ಸಮುದಾಯ ಆಸ್ಪತ್ರೆ ಸ್ಥಾಪನೆ ಮಾಡುವಂತೆ ಸಾರ್ವಜನಿಕರು, ಸಂಘಟನೆಗಳು ಹಾಗೂ ಎರಡು ಪಕ್ಷದ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಸುಮಾರು 10 ಗ್ರಾಮ ಪಂಚಾಯತಿಗಳು ಅವಲಂಬಿತವಾಗಿದ್ದು, ಅವುಗಳಲ್ಲಿ 4 ಪಂಚಾಯತಿಗಳು ಹುಂಚ ಹೋಬಳಿಗೆ ಸೇರಿದರೆ ಉಳಿದ 6 ಪಂಚಾಯತಿಗಳು ಕೆರೆಹಳ್ಳಿ ಹೋಬಳಿಗೆ ಸೇರಿವೆ. ಜನಸಂಖ್ಯೆ ಹೆಚ್ಚಿರುವ ಈ ಪ್ರದೇಶಕ್ಕೆ ಉತ್ತಮ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದ್ದರೂ ಸಮುದಾಯ ಆಸ್ಪತ್ರೆ ಸ್ಥಾಪನೆ ಕನಸು ಇನ್ನೂ ಸಾಕಾರವಾಗಿಲ್ಲ.
ಇಬ್ಬರು ಶಾಸಕರಿಂದಲೂ ಮಲತಾಯಿ ಧೋರಣೆ??
ಇದರ ಜೊತೆಗೆ ಹೊಸನಗರ ತಾಲೂಕು “ರಿಪ್ಪನ್ ಪೇಟೆ” ಯಲ್ಲಿ ಆಗಿರುವ ಆಡಳಿತಾತ್ಮಕ ವ್ಯವಸ್ಥೆಯೂ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ಕೇಳಿಬರುತ್ತಿದೆ. ಕೆರೆಹಳ್ಳಿ ಹೋಬಳಿ,ರಿಪ್ಪನ್ ಪೇಟೆ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದರೆ, ಹುಂಚ ಹೋಬಳಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಸೇರಿದೆ. ಹೀಗಾಗಿ ಈ ಭಾಗದ ಸಮಸ್ಯೆಗಳು ಎರಡು ಕ್ಷೇತ್ರಗಳ ನಡುವೆ ಸಿಲುಕಿಕೊಂಡಂತಾಗಿದ್ದು, ಇಬ್ಬರ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ. ಎರಡು ಕ್ಷೇತ್ರದ ಸಂಪೂರ್ಣ ಗಮನ ಸಿಗದೆ ಅಭಿವೃದ್ಧಿ ಕೆಲಸಗಳು ವಿಳಂಬವಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಅವಲಂಬಿತವಾಗಿರುವ ಗ್ರಾಮಗಳಿಗೆ ತುರ್ತು ಆರೋಗ್ಯ ಸೇವೆಗಳು ಬೇಕಾದಾಗ ದೂರದ ಪಟ್ಟಣಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ರಸ್ತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲೂ ಈ ಪ್ರದೇಶ ಹಿಂದುಳಿದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟಕ್ಕೆ ಬಲ
ಈ ಹಿನ್ನೆಲೆಯಲ್ಲಿ ಹೊಸನಗರ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ಜನರಲ್ಲಿ ಬಲವಾಗುತ್ತಿದೆ. ತಾಲೂಕಿಗೆ ಒಬ್ಬರೇ ಶಾಸಕರು ಇದ್ದರೆ ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ದೊರೆಯುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತವೆ ಎಂದು ಸಾರ್ವಜನಿಕರು ಆಶಿಸುತ್ತಿದ್ದಾರೆ.
ರಿಪ್ಪನ್ ಪೇಟೆ ಸಮುದಾಯ ಆಸ್ಪತ್ರೆ ಬೇಡಿಕೆ ಹಾಗೂ ಹೊಸನಗರ ತಾಲೂಕಿನ ಅಭಿವೃದ್ಧಿ ಪ್ರಶ್ನೆಗಳು ಮುಂದಿನ ದಿನಗಳಲ್ಲಿ ಮತ್ತೆ ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
















Leave a Reply