
ಶಿವಮೊಗ್ಗ, ಮೇ 04: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ದೇಶದ ಜನತೆ ಅಭಿವೃದ್ಧಿ, ಪರಿವರ್ತನೆ ಮತ್ತು ದಿಟ್ಟ ನಾಯಕತ್ವಕ್ಕೆ ಸ್ಪಷ್ಟ ಬೆಂಬಲ ನೀಡಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ . ರಾಘವೇಂದ್ರ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು, ಈ ಫಲಿತಾಂಶಗಳು ಕೇವಲ ಆಡಳಿತದ ಕಾರ್ಯಕ್ಷಮತೆಗೆ ಜನತೆ ನೀಡಿದ ಮೌಲ್ಯಮಾಪನವಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ‘ವಿಕಸಿತ ಭಾರತ’ ದೃಷ್ಟಿಕೋನಕ್ಕೆ ದೊರೆತ ದೊಡ್ಡ ಬೆಂಬಲವಾಗಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಭಯ ಮತ್ತು ಅರಾಜಕತೆಯ ರಾಜಕಾರಣಕ್ಕೆ ತೆರೆ ಬಿದ್ದಿದ್ದು, ಅಸ್ಸಾಂನಲ್ಲಿ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿರುವ ಸರ್ಕಾರಕ್ಕೆ ಜನರು ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿಯೂ ರಾಜಕೀಯ ಬದಲಾವಣೆಯ ಸಂಕೇತಗಳು ಕಾಣಿಸಿಕೊಂಡಿದ್ದು, ಜನರು ಭ್ರಷ್ಟಾಚಾರ ವಿರೋಧಿ ಆಡಳಿತದ ಪರವಾಗಿ ತೀರ್ಮಾನ ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಇದಲ್ಲದೆ, ಕರ್ನಾಟಕದ ಉಪಚುನಾವಣೆಗಳಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶ ಸಿಗದಿದ್ದರೂ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಜನರ ಅಸಮಾಧಾನ ಸ್ಪಷ್ಟವಾಗಿ ಗೋಚರಿಸಿದೆ ಎಂದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಅಂತರದ ಗೆಲುವು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳು, ವಿಶೇಷವಾಗಿ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ದೇಶದಾದ್ಯಂತ ಮಹಿಳೆಯರ ವಿಶ್ವಾಸವನ್ನು ಗಳಿಸಿರುವುದು ಈ ಯಶಸ್ಸಿನ ಪ್ರಮುಖ ಕಾರಣ ಎಂದು ಅವರು ಹೇಳಿದರು.
ಕೊನೆಗೆ, ಪಕ್ಷದ ರಾಷ್ಟ್ರೀಯ ನಾಯಕತ್ವ ಹಾಗೂ ತಳಮಟ್ಟದ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಅಪೂರ್ವ ಜನಾದೇಶ ಪಡೆಯಲು ಸಾಧ್ಯವಾಗಿದೆ ಎಂದು ಬಿ.ವೈ ರಾಘವೇಂದ್ರ ಹೇಳಿದರು.















Leave a Reply