ನವದೆಹಲಿ: ದೇಶದ ಮಹಿಳೆಯರ ಸುರಕ್ಷತೆ, ಸಂರಕ್ಷಣೆ ಮತ್ತು ಸಬಲೀಕರಣವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಮಿಷನ್ ಶಕ್ತಿ’ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಒಟ್ಟು 698.82 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 38,000ಕ್ಕೂ ಹೆಚ್ಚು ಮಹಿಳೆಯರಿಗೆ ನೇರ ನೆರವು ಒದಗಿಸಲಾಗಿದೆ.

ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಇದರ ಕುರಿತು ಮಹತ್ವದ ಮಾಹಿತಿ ನೀಡಿದೆ.
‘ಮಿಷನ್ ಶಕ್ತಿ’ ಯೋಜನೆ ‘ಸಂಬಲ್’ (ಮಹಿಳಾ ಸುರಕ್ಷತೆ ಮತ್ತು ಸಂರಕ್ಷಣೆ) ಹಾಗೂ ‘ಸಾಮರ್ಥ್ಯ’ (ಮಹಿಳಾ ಸಬಲೀಕರಣ) ಎಂಬ ಎರಡು ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ವೈದ್ಯಕೀಯ ನೆರವು, ಕಾನೂನು ಸಹಾಯ, ತಾತ್ಕಾಲಿಕ ಆಶ್ರಯ, ಪೊಲೀಸ್ ಸಹಾಯ ಮತ್ತು ಮಾನಸಿಕ ಸಮಾಲೋಚನೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವುದು ಇದರ ಉದ್ದೇಶವಾಗಿದೆ.
ರಾಜ್ಯದ 31 ಜಿಲ್ಲೆಗಳಲ್ಲಿ 42 ‘ಒನ್ ಸ್ಟಾಪ್ ಸೆಂಟರ್’ಗಳ ಮೂಲಕ ಮಹಿಳೆಯರಿಗೆ ಸಹಾಯ ನೀಡಲಾಗುತ್ತಿದ್ದು, ಮಹಿಳಾ ಸಹಾಯವಾಣಿ (181) ಮೂಲಕ 96,000ಕ್ಕೂ ಹೆಚ್ಚು ಮಹಿಳೆಯರಿಗೆ 24 ಗಂಟೆಗಳ ತುರ್ತು ಸೇವೆ ಲಭ್ಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕರ್ನಾಟಕದ ವಿವಿಧ ಭಾಗಗಳಿಗೆ ಒನ್ ಸ್ಟಾಪ್ ಸೆಂಟರ್ಗಳ ವಿಸ್ತರಣೆ ಹಾಗೂ ಹೆಚ್ಚಿನ ಅನುದಾನ ಬಿಡುಗಡೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಏಪ್ರಿಲ್ 2015ರಿಂದ ಈವರೆಗೆ 926 ‘ಒನ್ ಸ್ಟಾಪ್ ಸೆಂಟರ್’ಗಳ ಮೂಲಕ 13.37 ಲಕ್ಷ ಮಹಿಳೆಯರಿಗೆ ನೆರವು ನೀಡಲಾಗಿದ್ದು, ಮಹಿಳಾ ಹೆಲ್ಪ್ಲೈನ್ ಮೂಲಕ ದೇಶಾದ್ಯಂತ 99.09 ಲಕ್ಷ ಮಹಿಳೆಯರಿಗೆ ಸಹಾಯ ತಲುಪಿದೆ.
ಕರ್ನಾಟಕದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 5 ಒನ್ ಸ್ಟಾಪ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿದ್ದು, ಶಿವಮೊಗ್ಗ ಸೇರಿದಂತೆ ಬೆಳಗಾವಿ, ಧಾರವಾಡ, ಮೈಸೂರು, ತುಮಕೂರು, ವಿಜಯನಗರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 2 ಕೇಂದ್ರಗಳಿವೆ.
ಒಟ್ಟಾರೆ, ‘ಮಿಷನ್ ಶಕ್ತಿ’ ಯೋಜನೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅಗತ್ಯ ನೆರವು, ರಕ್ಷಣೆ ಮತ್ತು ಸಬಲೀಕರಣ ಒದಗಿಸುವ ಮಹತ್ವದ ಯೋಜನೆಯಾಗಿ ಹೊರಹೊಮ್ಮಿದೆ.
















Leave a Reply