ಹೊಸನಗರ/ರಿಪ್ಪನ್ ಪೇಟೆ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲೂಕಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ವಿವಿಧ ಶಾಲೆಗಳ ಪ್ರತಿಭಾವಂತರು ಉತ್ತಮ ಅಂಕಗಳನ್ನು ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಟ್ಟೆಮಲ್ಲಪ್ಪದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ವಿದ್ಯಾರ್ಥಿ ಜೀವನ್ ಎ. 618 ಅಂಕಗಳನ್ನು ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾನೆ.



ಸರ್ಕಾರಿ ಶಾಲೆಗಳ ವಿಭಾಗದಲ್ಲಿಯೂ ಉತ್ತಮ ಸಾಧನೆ ದಾಖಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೊಸನಗರದ ಸ್ನೇಹ 613 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡರೆ, ಮಾನ್ಯ ಆರ್. 612 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ರಿಪ್ಪನ್ ಪೇಟೆಯ ದೀಕ್ಷಿತ್ ಆರ್. 608 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಬಂಧಿತ ಶಾಲೆಗಳಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಎ ವೈ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ರೀತಿಯ ಕಠಿಣ ಪರಿಶ್ರಮವನ್ನು ಮುಂದುವರಿಸಿ ಇನ್ನಷ್ಟು ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು. ಜೊತೆಗೆ ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಗಳಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ವಿನಯ್ ಹೆಗಡೆ ಕರ್ಕಿ, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ರಾಜೇಂದ್ರಪ್ಪ, ಶಿಕ್ಷಣ ಸಂಯೋಜಕಿ ಸುಮಾರಾಣಿ ಎಚ್. ಹಾಗೂ ಆಯಾ ಶಾಲೆಗಳ ಮುಖ್ಯ ಶಿಕ್ಷಕರಾದ ರೇಣುಕೇಶ್, ಕರುಣಾಕರ, ಸುಹಾಸ್ ಸೇರಿದಂತೆ ಸಿಆರ್ಪಿಗಳಾದ ಅರವಿಂದ್, ರಾಮದಾಸ್, ಮಂಜುನಾಥ್ ಮತ್ತು ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.



















Leave a Reply