
ಹೊಸನಗರ : “ಪುಸ್ತಕ ಮಸ್ತಕಕ್ಕಿಳಿದಾಗ ಮನಸ್ಸು ಪರಿವರ್ತನೆಯಾಗಿ, ಅದರೊಂದಿಗೆ ಕುಟುಂಬ, ಸಮಾಜ, ಗ್ರಾಮ ಹೀಗೆ ಪ್ರಪಂಚವೇ ಬದಲಾಗಬಲ್ಲದು” ಎಂದು ಸಾಹಿತಿ ಸುಬ್ರಹ್ಮಣ್ಯ ಹೇಳಿದರು.
ತಾಲೂಕಿನ ನಾಗರಕೋಡಿಗೆ ಗ್ರಾಮದ ಶ್ರೀ ನಾಗಪ್ಪ ಅವರ ಮನೆಯಲ್ಲಿ ಉದ್ಘಾಟನೆಯಾದ ನೂತನ ಪುಸ್ತಕಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಗಳನ್ನು ಓದುವ ಮೂಲಕ ಮನುಷ್ಯನ ಮನಸ್ಸು ವಿಶಾಲಗೊಂಡು ದ್ವೇಷಗಳಿಂದ ದೂರವಾಗುತ್ತದೆ. ಭಾಷೆ-ಭಾಷೆಗಳ ನಡುವಿನ ವೈಷಮ್ಯವೂ ನಾಶವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾದಂಬರಿಗಳು ಚಲನಚಿತ್ರಗಳಾದಾಗ ಅವುಗಳ ಮೂಲ ಮಹತ್ವ ಕಡಿಮೆಯಾಗುತ್ತದೆ. ಪ್ರತಿಯೊಂದು ಕಾದಂಬರಿಯ ಸೊಗಸು ಅದರ ವರ್ಣನೆ ಹಾಗೂ ಪ್ರತಿ ಪುಟದಲ್ಲಿರುವ ಅನುಭವದಲ್ಲೇ ಅಡಕವಾಗಿದೆ. ಅದನ್ನು ದೃಶ್ಯ ಮಾಧ್ಯಮದಲ್ಲಿ ಸಂಪೂರ್ಣವಾಗಿ ಹಿಡಿದಿಡಲು ಸಾಧ್ಯವಿಲ್ಲ ಎಂದರು.
ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು 18 ಗಂಟೆಗಳ ಕಾಲ ನಿರಂತರವಾಗಿ ಓದಿದಾಗ ಸಿಗುವ ಅನುಭೂತಿಯನ್ನು ಎಷ್ಟೇ ಪ್ರಯತ್ನಪಟ್ಟರೂ ದೃಶ್ಯ ಮಾಧ್ಯಮದಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ‘ನಾಯಿ ನೆರಳು’, ‘ದ್ವೀಪ’ ಮೊದಲಾದ ಕಾದಂಬರಿಗಳ ಆಧಾರಿತ ಚಲನಚಿತ್ರಗಳನ್ನು ಮಾತ್ರ ನೋಡಿದವರಿಗೆ ಮೂಲ ಕಾದಂಬರಿಯ ಸೊಗಸು ಅರಿವಾಗುವುದಿಲ್ಲ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾಬಲ ಅವರು, ಪುಸ್ತಕಗಳ ಮಹತ್ವವನ್ನು ಅರಿತವರೇ ಗ್ರಂಥಾಲಯ ಸ್ಥಾಪನೆಗೆ ಮುಂದಾಗುತ್ತಾರೆ. ಮನೆಮನೆಗೂ ಗ್ರಂಥಾಲಯ ಎಂಬ ಪ್ರಯತ್ನ ಶ್ಲಾಘನೀಯ ಎಂದರು.
ಆದರೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಮಟ್ಟದ ಗ್ರಂಥಾಲಯಗಳು ನಿಧಾನವಾಗಿ ನಶಿಸಿ ಹೋಗುತ್ತಿದ್ದು, ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಗಣೇಶಮೂರ್ತಿ ಮಾತನಾಡಿ, “ಒಂದು ಗ್ರಂಥಾಲಯದಲ್ಲಿ ಗಾಂಧೀಜಿ ಕುರಿತ ಪುಸ್ತಕ ಮಾತ್ರ ಇದ್ದರೆ ಅದು ಪರಿಪೂರ್ಣವಾಗುವುದಿಲ್ಲ. ಗೂಡ್ಸೆ ಕುರಿತ ಪುಸ್ತಕವೂ ಇದ್ದಾಗ ಮಾತ್ರ ಪೂರ್ಣ ಜ್ಞಾನ ಸಾಧ್ಯ. ಯಾವುದೇ ವಿಷಯದ ಕುರಿತು ಮಾತನಾಡುವ ವ್ಯಕ್ತಿ ಅದರ ಪರ-ವಿರೋಧದ ಎರಡು ಮುಖಗಳನ್ನೂ ಓದಿರಬೇಕು” ಎಂದು ಅಭಿಪ್ರಾಯಪಟ್ಟರು.
ಈ ರೀತಿಯಾಗಿ ಓದಿದ ಪುಸ್ತಕಗಳು ಮನೆಯಲ್ಲಿ ಸಂಗ್ರಹವಾದಾಗ ಮಾತ್ರ ಆಲೋಚನೆಗಳು ಸ್ಪಷ್ಟಗೊಳ್ಳುತ್ತವೆ. ಸತ್ಯವನ್ನು ತಿಳಿದು ಸಮರ್ಪಕವಾಗಿ ಮಾತನಾಡಲು ಹಾಗೂ ಅನುಷ್ಠಾನಕ್ಕೆ ತರಲು ಸಹಕಾರಿಯಾಗುತ್ತದೆ ಎಂದರು. ಮನೆಮನೆಗೂ ಗ್ರಂಥಾಲಯ ಎಂಬ ಪರಿಕಲ್ಪನೆಯ ಮಹತ್ವ ಎಲ್ಲರಿಗೂ ತಿಳಿಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಹನಿಯ ರವಿ ಅವರು ನೂತನ ಗ್ರಂಥಾಲಯಕ್ಕೆ ಹತ್ತಾರು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದರು.
ವಕೀಲ ರಾಮಪ್ಪ, ಜಿ.ಎನ್. ಬಸಪ್ಪಗೌಡ, ಡಿ.ಎಸ್. ರಾಘವೇಂದ್ರ, ವಿಶ್ವೇಶ್ವರ ಗೌಡ, ಶ್ರೀಮತಿ ರಮಾ, ನವೀನ್ ಕುಮಾರ್, ಕಸಾಪ ಕಾರ್ಯದರ್ಶಿ ಕೆ.ಜಿ. ನಾಗೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶ್ರೀಮತಿ ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಜಾತ ಪ್ರಾರ್ಥಿಸಿದರು. ಶ್ರೀ ಶಿವಾನಂದಪ್ಪ ಸ್ವಾಗತಿಸಿದರು. ಶ್ರೀಮತಿ ಶುಭ ದಿನೇಶ್ ವಂದಿಸಿದರು.
















Leave a Reply