ಹೊಸನಗರ: ಏಪ್ರಿಲ್-ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ಮಕ್ಕಳ ರಜೆ ಆರಂಭವಾಗಿದ್ದು, ಈ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ದುರ್ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ಹೊಸನಗರ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೃಷಿ ಹೊಂಡ, ಕೆರೆ, ಬಾವಿ ಮುಂತಾದ ಜಾಗಗಳಲ್ಲಿ ಈಜಲು ಹೋಗುವ ವೇಳೆ ಮಕ್ಕಳು ಹಾಗೂ ಕೃಷಿಕರು ಅಪಾಯಕ್ಕೆ ಒಳಗಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭಗಳನ್ನು ತಪ್ಪಿಸಲು ರೈತರು ತಮ್ಮ ಜಮೀನಿನಲ್ಲಿ ಇರುವ ಹೊಂಡ, ಕೆರೆಗಳ ಸುತ್ತಲು ಬಲವಾದ ಬೇಲಿ ನಿರ್ಮಿಸುವುದು ಅಗತ್ಯ ಎಂದರು.
ಬೇಲಿ ನಿರ್ಮಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಮುಳ್ಳುಗಂಟುಗಳನ್ನು ನೆಟ್ಟು ತಾತ್ಕಾಲಿಕ ರಕ್ಷಣೆಯನ್ನು ಒದಗಿಸಬಹುದು. ಜೊತೆಗೆ, ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಇರುವ ಹೊಂಡ-ಕೆರೆಗಳ ಬಳಿ ಎಚ್ಚರಿಕಾ ಫಲಕಗಳನ್ನು ಅಳವಡಿಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಹೊಂಡಗಳಲ್ಲಿ ಇಳಿಯುವ ಸಂದರ್ಭಗಳಲ್ಲಿ ಜಾರುವ ಸಾಧ್ಯತೆ ಹೆಚ್ಚಿರುವುದರಿಂದ, ಮೇಲಕ್ಕೆ ಹತ್ತಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಗ್ಗ ಅಥವಾ ಇತರೆ ಸುರಕ್ಷತಾ ಸಾಧನಗಳನ್ನು ಅಳವಡಿಸುವುದು ಒಳಿತು ಎಂದು ಸಲಹೆ ನೀಡಿದರು.
ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿ ಜಾಗೃತಿ ವಹಿಸುವುದು ಅತ್ಯುತ್ತಮ ಎಂದು ಸಚಿನ್ ಹೆಗಡೆ ತಿಳಿಸಿದ್ದಾರೆ.















Leave a Reply