ಹೊಸನಗರ: ಕಸ್ತೂರಿ ರಂಗನ್ ವರದಿಯ ವಿರುದ್ಧ ಸೆಪ್ಟೆಂಬರ್ 7ರಂದು ತೀರ್ಥಹಳ್ಳಿಯಲ್ಲಿ ನಡೆಯಲಿರುವ ಸುಮಾರು 7 ಕಿಲೋಮೀಟರ್ ಪಾದಯಾತ್ರೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರಿಗೆ ಅವಕಾಶ ನೀಡುವುದಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸ್ಪಷ್ಟಪಡಿಸಿದರು.
ಹೊಸನಗರದ ಗಾಂಧಿಮಂದಿರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವುದರಿಂದ, ಕೇಂದ್ರ ಸರ್ಕಾರವನ್ನು ಬೆಂಬಲಿಸುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಭಾಗವಹಿಸುವ ಅವಕಾಶ ಇರುವುದಿಲ್ಲ ಎಂದರು.
ಕೇಂದ್ರ ಸರ್ಕಾರವೇ ಕಸ್ತೂರಿ ರಂಗನ್ ಕರಡು ಅಧಿಸೂಚನೆ ಹೊರಡಿಸಿರುವ ಕಾರಣ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗುವುದು ಅನಿವಾರ್ಯವಾಗಿದೆ. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವ ಸಾಧ್ಯತೆ ಇರುವುದರಿಂದ ರೈತರು, ಪರಿಸರ ಹೋರಾಟಗಾರರು ಹಾಗೂ ಇತರೆ ಪಕ್ಷಗಳ ಮುಖಂಡರನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಮಲೆನಾಡಿನ ಜನರಿಗೆ ಅನ್ಯಾಯವಾಗಲಿದೆ:
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅರಣ್ಯ ಅಂಚಿನಲ್ಲಿ ವಾಸಿಸುವ ಸಾವಿರಾರು ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಕಾಡು ಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಸ್ಥಳಾಂತರಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ವರದಿ ಜಾರಿಯಾದರೆ ಜನರನ್ನು ಎಲ್ಲಿಗೆ ಸ್ಥಳಾಂತರಿಸುತ್ತಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ಅವರು ಮೂಲತಃ ಶಿಕ್ಷಣ ತಜ್ಞರು, ಪರಿಸರ ತಜ್ಞರಲ್ಲ. ಆದ್ದರಿಂದ ಮಲೆನಾಡಿನ ಜನರ ಜೀವನೋಪಾಯವನ್ನು ಪರಿಗಣಿಸದೇ ರೂಪಿಸಲಾದ ವರದಿಯನ್ನು ಜಾರಿಗೆ ತರಬಾರದು ಎಂದು ಹೇಳಿದರು.
ಮೊದಲು ವಸತಿ–ಉದ್ಯೋಗ ನೀಡಿ:
1900ರಲ್ಲಿ ಭಾರತದ ಜನಸಂಖ್ಯೆ ಸುಮಾರು 20 ಕೋಟಿ ಇದ್ದರೆ, ಇಂದು ಅದು 140 ಕೋಟಿಯನ್ನು ದಾಟಿದೆ. ಇಷ್ಟೊಂದು ಜನರಿಗೆ ವಸತಿ ಮತ್ತು ಉದ್ಯೋಗ ಒದಗಿಸುವುದು ಸರ್ಕಾರದ ಮೊದಲ ಕರ್ತವ್ಯ. ಕೇವಲ ಗಾಳಿ ಮತ್ತು ನೀರಿನಿಂದ ಬದುಕಲು ಸಾಧ್ಯವಿಲ್ಲ; ಜನರ ಬದುಕಿನ ಹಕ್ಕುಗಳನ್ನು ಕಾಪಾಡಿದ ಬಳಿಕವೇ ಇಂತಹ ಪರಿಸರ ನೀತಿಗಳನ್ನು ಜಾರಿಗೆ ತರಬೇಕು ಎಂದು ಕಿಮ್ಮನೆ ಅಭಿಪ್ರಾಯಪಟ್ಟರು.
2013ರಲ್ಲಿ ಮೊದಲ ಕರಡು ಪ್ರಕಟವಾದ ದಿನದಿಂದಲೇ ಕಾಂಗ್ರೆಸ್ ಈ ವರದಿಯನ್ನು ವಿರೋಧಿಸುತ್ತಿದೆ. ಈಗ ಮತ್ತೆ ಕರಡು ಅಧಿಸೂಚನೆ ಹೊರಡಿಸಿರುವುದರಿಂದ ಮುಂಬರುವ ಮೂರು ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ಕನಿಷ್ಠ ಒಂದು ದಿನ ಈ ಕುರಿತು ಚರ್ಚಿಸಿ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪಾದಯಾತ್ರೆ ವಿವರ:
ಸೆಪ್ಟೆಂಬರ್ 7ರಂದು ತೀರ್ಥಹಳ್ಳಿ ತಾಲೂಕಿನ ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಸುಮಾರು 7 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಗಡೆ ಚಾಲನೆ ನೀಡಲಿದ್ದು, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಮೀಪ ನಡೆಯುವ ಸಾರ್ವಜನಿಕ ಸಭೆಯನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ.
ಮಲೆನಾಡಿನ ಎಲ್ಲ ಜನರು ಪಕ್ಷಾತೀತವಾಗಿ ಭಾಗವಹಿಸಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಕಿಮ್ಮನೆ ರತ್ನಾಕರ್ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್, ಪ್ರಭಾಕರ್, ಅಶ್ವಿನಿ ಕುಮಾರ್, ಜಯನಗರ ಗುರು, ಗುರು ಸೋಡದಕಲ್ಲು, ಧರ್ಮರಾವ್, ಶುಭಾಕರ, ವಕೀಲ ಮೋಹನ್ ಶೆಟ್ಟಿ, ಇಕ್ಬಾಲ್ ಉಬೇದುಲ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

















Leave a Reply