

ರಿಪ್ಪನ್ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ ಹಾಗೂ ಮದೀನಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.
ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, “ಪ್ರತಿಯೊಂದು ಧರ್ಮವನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಹೋದರತ್ವ, ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕುವುದು ಇಸ್ಲಾಂ ಮತದ ಮುಖ್ಯ ಸಂದೇಶವಾಗಿದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ” ಎಂದು ಹೇಳಿದರು.
ನಂತರ ಜುಮ್ಮಾ ಮಸೀದಿಯಿಂದ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ, ಕಾರ್ಯದರ್ಶಿ ಶೇಖಬ್ಬ, ಮುಖಂಡರಾದ ಆರ್.ಎ. ಚಾಬುಸಾಬ್, ಅಮೀರ್ ಹಂಜಾ, ಆಸೀಫ್ ಭಾಷಾಸಾಬ್, ಪತ್ರಕರ್ತ ರಫೀ ರಿಪ್ಪನ್ಪೇಟೆ, ಮುಸ್ತಾಫ, ಫಾಜಿಲ್, ರೆಹಮಾನ್, ನದೀಮ್, ರಹೀಮ್ ಚಾಲಿ, ಫೈಜಲ್, ಸಲೀಂ, ಅಫ್ಜಲ್ ಬ್ಯಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗಾಳಿಬೈಲಿನಲ್ಲಿ ವಿಶೇಷ ಪ್ರಾರ್ಥನೆ
ರಿಪ್ಪನ್ಪೇಟೆ ಸಮೀಪದ ಗಾಳಿಬೈಲು ಗ್ರಾಮದ ಈದ್ಗಾ ಮೈದಾನದಲ್ಲಿಯೂ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಾಳಿಬೈಲು ಜುಮ್ಮಾ ಮಸೀದಿ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಇದೇ ವೇಳೆ ಹೊಸನಗರ, ಬಟ್ಟೆಮಲ್ಲಪ್ಪ, ಕೆಂಚನಾಲ, ಗರ್ತಿಕೆರೆ ಹಾಗೂ ಸುಣ್ಣದ ಬಸ್ತಿ ಗ್ರಾಮಗಳಲ್ಲಿಯೂ ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಆಚರಿಸಿದರು.
















Leave a Reply