ರಿಪ್ಪನ್‌ಪೇಟೆ (ಬೆಳ್ಳೂರು): ‘ಹಿಂದೂ ಧರ್ಮದ ಮೂಲ ಆಶಯವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಚಯಿಸುವ ಮೂಲಕ ತಾಯಂದಿರು ಸನಾತನ ಸಂಸ್ಕೃತಿಯ ಏಳಿಗೆಗೆ ಸಹಕರಿಸಬೇಕು’ ಎಂದು ಆರೆಸೆಸ್ಸ್ ವಿಭಾಗ ವ್ಯವಸ್ಥಾ ಪ್ರಮುಖ್ ಲೋಹಿತಾಶ್ವ ಕೇದಿಗೆರೆ ಹೇಳಿದರು.
ಹೊಸನಗರ ತಾಲ್ಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಮಂಗಳವಾರ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳುಗುಳಿ ಶಂಕರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಸಮಾವೇಶದಲ್ಲಿ ಮಾತನಾಡಿದರು.
‘ಪ್ರತಿಯೊಂದು ಜೀವರಾಶಿಗಳಲ್ಲೂ ದೈವತ್ವ ಕಾಣುವುದು ಹಿಂದೂ ಧರ್ಮದ ಪ್ರಮುಖ ಆಶಯ. ಪೂರ್ವಿಕರು ಪಾಲಿಸಿಕೊಂಡು ಬಂದ ಜಾನಪದ ಸೊಗಡು, ಧಾರ್ಮಿಕ ಚಟುವಟಿಕೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿ ಮನೆ ಹಾಗೂ ಊರಿನಲ್ಲಿ ಭಜನಾ ತಂಡಗಳನ್ನು ಹುಟ್ಟು ಹಾಕಬೇಕು. ಮಕ್ಕಳಿಗೆ ಭಕ್ತಿ, ಭಾವ ಬೆಳೆಸುವ ರಾಮಾಯಣ, ಮಹಾಭಾರತ-ದಂತಹ ನೀತಿ ಕಥೆಗಳನ್ನು ಬೋಧಿಸಬೇಕು’ ಎಂದು ಹೇಳಿದರು.
‘ಪ್ರಕೃತಿ ಮಾತೆಯ ಆರಾಧನೆಯ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.
ಸಾರಗನಜಡ್ಡು ಗ್ರಾಮದ ಅವಧೂತ ಯೋಗೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ‘ಮಾನವೀಯ ಧರ್ಮಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ಇತಿಹಾಸದ ಪುಟದಲ್ಲಿ ರಾರಾಜಿಸಿದ ಹಲವು ಧರ್ಮಗಳು ಇಂದು ಹೇಳಹೆಸರಿಲ್ಲದಂತೆ ನಶಿಸಿಹೋಗಿವೆ. ಆದರೆ, ಸನಾತನ ಹಿಂದೂ ಧರ್ಮ ಇಂದಿಗೂ ತನ್ನ ಚಾರಿತ್ರ್ಯ ಉಳಿಸಿಕೊಂಡು ಸದೃಢವಾಗಿ ನೆಲೆ ನಿಂತಿದೆ’ ಎ೦ದರು.
ಪ್ರಾಸ್ತಾವಿಕ ಮಾತನಾಡಿದ ಬೆಳ್ಳೂರು ವಸಂತ ಕುಮಾರ್ ಸಮಾಜದ ಉನ್ನತಿಯೊಂದಿಗೆ, ರಾಷ್ಟ್ರ ಜಾಗೃತಿ ಕಾರ್ಯವು ಆಗಬೇಕಿದೆ ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಪೂರೈಸಿದ ಈ ಸಂಧರ್ಭದಲ್ಲಿ ಸಂಘವು ಪಂಚ ಪರಿವರ್ತನೆ ಜಾಗೃತಿ ಮಾಡುತ್ತಿದೆ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಭೋಧನ, ಸ್ವದೇಶೀ, ನಾಗರೀಕ ಶಿಷ್ಟಾಚಾರ ಮುಂತಾದ ವಿಚಾರವನ್ನು ಸಮಾಜದೊಂದಿಗೆ ಚರ್ಚಿಸುತ್ತಿದೆ ಎಂದು ಹೇಳಿದರು.
ಶಿಶುಮಂದಿರದ ಗಾಯತ್ರಿ ಮಾತಾಜಿ ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಬಾಲ್ಯದಿಂದಲೇ ಕಳಿಸಿದರೆ ಅದರ ಪ್ರೇರಣೆಗಳಿಂದ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳುತ್ತಾರೆ ಎಂದು ಅಭಿಪ್ರಾಯಿಸಿದರು.
ಹೊಸನಗರ ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ವಿನಯ್ ಹೆಗ್ಗೆರೆ , ಬೆಳ್ಳೂರು ತಿಮ್ಮಪ್ಪ,ವಾಸಪ್ಪ, ಮ್ಯಾಮೋಸ್ ನಿರ್ದೇಶಕ ಕೆ.ಎಚ್. ಧರ್ಮೇಂದ್ರ, ಚಂದ್ರು ಬಸವಾಪುರ,ರಾಘವೇಂದ್ರ,ಲೋಕೇಶ್,ಗಂಗಾಧರ ಕಳಸೆ, ಗಿರೀಶ್ ಕೊಳವಂಕ,ಯೋಗೇಂದ್ರಣ್ಣ, ನಾರಾಯಣ ಸೇರಿದಂತೆ ನೂರಾರು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು..ಇದೇ ಸಂದರ್ಭದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶೋಭಾಯಾತ್ರೆ ನೆರವೇರಿತು.















Leave a Reply