
ಆನಂದಪುರ: ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ಮೈಸೂರಿನ ವ್ಯಕ್ತಿಯೊಬ್ಬರಿಂದ ಸುಮಾರು ₹9.60 ಲಕ್ಷ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ದೋಚಿದ ಘಟನೆ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರಿನ ಕೆ.ಆರ್. ಪುರ ನಿವಾಸಿ ಜಗದೀಶ್ ಜೆ. (41) ವಂಚನೆಗೆ ಒಳಗಾದವರು. ಈ ಕುರಿತು ಅವರು ನೀಡಿದ ದೂರಿನ ಮೇರೆಗೆ ಆನಂದಪುರ ಠಾಣೆಯಲ್ಲಿ ಮಂಜು ಸೇರಿದಂತೆ ಐವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ 1ರಂದು ಜಗದೀಶ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ತಮ್ಮ ಬಳಿ ನಿಧಿ ರೂಪದಲ್ಲಿ ಸಿಕ್ಕಿರುವ ಬಂಗಾರದ ನಾಣ್ಯಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಬಳಿಕ ವಿಡಿಯೋ ಕಾಲ್ ಮೂಲಕ ನಾಣ್ಯಗಳನ್ನು ತೋರಿಸಿ ವಿಶ್ವಾಸ ಮೂಡಿಸಿದ್ದಾರೆ.
ಇದನ್ನು ನಂಬಿದ ಜಗದೀಶ್ ಅವರು ಜೂನ್ 2ರಂದು ಹರಿಹರಕ್ಕೆ ತೆರಳಿದ್ದು, ಅಲ್ಲಿ ಆರೋಪಿಗಳು ಒಂದು ನಾಣ್ಯ ನೀಡಿ ಅದರ ಅಸಲಿತನವನ್ನು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದ್ದಾರೆ. ಮೈಸೂರಿಗೆ ಮರಳಿದ ಬಳಿಕ ಪರಿಶೀಲನೆ ನಡೆಸಿದಾಗ ನಾಣ್ಯ ಅಸಲಿ ಬಂಗಾರವೆಂದು ಖಚಿತವಾಗಿದೆ.
ನಂತರ ಜೂನ್ 3ರಂದು ಆರೋಪಿಗಳು ಅರ್ಧ ಕೆಜಿ ಬಂಗಾರದ ನಾಣ್ಯಗಳನ್ನು ₹10 ಲಕ್ಷಕ್ಕೆ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಜಗದೀಶ್ ಅವರು ಮನೆಯ ದಾಖಲೆಗಳು ಹಾಗೂ ಶ್ಯೂರಿಟಿ ಚೆಕ್ ನೀಡಿ ಫೈನಾನ್ಸ್ ಸಂಸ್ಥೆಯಿಂದ ₹10 ಲಕ್ಷ ಸಾಲ ಪಡೆದಿದ್ದಾರೆ.
ಜೂನ್ 4ರಂದು ಬೆಳಗಿನ ಜಾವ ಜಗದೀಶ್ ಅವರು ತಮ್ಮ ಅಳಿಯ ಮನೋಜ್ ಹಾಗೂ ಕಾರು ಚಾಲಕ ರೋಹಿತ್ ಸಿಂಗ್ ಅವರೊಂದಿಗೆ ಸಾಗರ ತಾಲೂಕಿನ ಜೋಗಿನಗದ್ದೆ ಗ್ರಾಮಕ್ಕೆ ತೆರಳಿದ್ದಾರೆ. ಅಲ್ಲಿ ಆರೋಪಿಗಳಾದ ಮಂಜು ಮತ್ತು ಆತನ ಸಹಚರರು ಹಣ ಪರಿಶೀಲಿಸುತ್ತಿದ್ದ ವೇಳೆ ಘಟನೆ ನಾಟಕೀಯ ತಿರುವು ಪಡೆದುಕೊಂಡಿದೆ.
ಈ ಸಂದರ್ಭ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಪೊಲೀಸರ ಸೋಗಿನಲ್ಲಿ ಬೆದರಿಕೆ ಹಾಕಿದ್ದಾರೆ. “ನೀವು ಇಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದೀರಾ? ಗಾಂಜಾ ವ್ಯಾಪಾರ ನಡೆಸುತ್ತಿದ್ದೀರಾ?” ಎಂದು ಗದರಿಸಿದ ವೇಳೆ ಮೊದಲ ಇಬ್ಬರು ಆರೋಪಿಗಳು ಜಗದೀಶ್ ಅವರ ಕೈಯಲ್ಲಿದ್ದ ₹9.60 ಲಕ್ಷ ನಗದು ಇದ್ದ ಬ್ಯಾಗ್ ಹಾಗೂ ನಾಣ್ಯದ ಬ್ಯಾಗ್‌ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದೇ ವೇಳೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಮನೋಜ್ ಅವರ ಮೊಬೈಲ್ ಹಾಗೂ ಜಗದೀಶ್ ಅವರ ಮೊಬೈಲ್ ಫೋನ್‌ಗಳನ್ನು ಉಳಿದ ಆರೋಪಿಗಳು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರವೀಣ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದೆ.














Leave a Reply