ರಿಪ್ಪನ್ ಪೇಟೆ :ಹನುಮಾನ್ ಚಾಲೀಸಾ ಪಠಿಸುತ್ತಲೇ 174 ಪ್ರಯಾಣಿಕರ ಜೀವ ರಕ್ಷಣೆ|ಪೈಲಟ್ ಸ್ಮಿತ್ ಮಚ್ಚರ್‌ಗೆ ಹಿಂಜಾವೇ ಶ್ಲಾಘನೆ

Addaheading 20261006 210506 0000 1 ರಿಪ್ಪನ್ ಪೇಟೆ :ಹನುಮಾನ್ ಚಾಲೀಸಾ ಪಠಿಸುತ್ತಲೇ 174 ಪ್ರಯಾಣಿಕರ ಜೀವ ರಕ್ಷಣೆ|ಪೈಲಟ್ ಸ್ಮಿತ್ ಮಚ್ಚರ್‌ಗೆ ಹಿಂಜಾವೇ ಶ್ಲಾಘನೆ
Spread the love

ರಿಪ್ಪನ್‌ಪೇಟೆ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ ಗಂಭೀರ ಘಟನೆಯ ಸಂದರ್ಭದಲ್ಲಿ ಅಪಾರ ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆ ಪ್ರದರ್ಶಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಹಿಂದೂ ಜಾಗರಣ ವೇದಿಕೆ ಶ್ಲಾಘಿಸಿದೆ.

  ಪಟ್ಟಣದ ವಿನಾಯಕ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತ.ಮ. ನರಸಿಂಹ, ಸ್ಮಿತ್ ಮಚ್ಚರ್ ಅವರು ಗಾಯಗೊಂಡಿದ್ದರೂ ಧೃತಿಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿ, ವಿಮಾನದಲ್ಲಿದ್ದ 174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಜೀವ ರಕ್ಷಣೆಗೆ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

  ಘಟನೆಯ ಸಂದರ್ಭದಲ್ಲಿ ಸ್ಮಿತ್ ಮಚ್ಚರ್ ಅವರು ಹನುಮಾನ್ ಚಾಲೀಸಾ ಪಠಿಸುತ್ತಾ ಧೈರ್ಯದಿಂದ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳನುಗ್ಗಿ ಕಾಕ್‌ಪಿಟ್‌ನಲ್ಲಿದ್ದ ಸಹಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ಬಳಿಕ ಇತರ ಪೈಲಟ್‌ಗಳ ಸಹಕಾರದೊಂದಿಗೆ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ತಿಳಿಸಿದರು.

ಇದು ಸಾಕ್ಷಾತ್ ಭಜರಂಗಿಯೇ ಬಂದು ರಕ್ಷಿಸಿದಂತಾಗಿದೆ ಎಂದು ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ತ ಮ ನರಸಿಂಹ ಬಣ್ಣಿಸಿದರು.

  ಘಟನೆಯಲ್ಲಿ ಗಾಯಗೊಂಡಿರುವ ಸ್ಮಿತ್ ಮಚ್ಚರ್ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಮತ್ತು ಧೈರ್ಯದಿಂದ ನೂರಾರು ಪ್ರಯಾಣಿಕರ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಹಿಂಜಾವೇ ಪ್ರಮುಖರು ಅಭಿಪ್ರಾಯಪಟ್ಟರು. ಸ್ಮಿತ್ ಮಚ್ಚರ್ ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದರು.

ಭಯೋತ್ಪಾದನೆ ಹಾಗೂ ಉಗ್ರವಾದದ ವಿರುದ್ಧ ಜಾಗತಿಕ ಸಮುದಾಯ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಹಿಂಜಾವೇ ಪ್ರಮುಖರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾರತ್ ಮಾತಾ ಕಿ ಜೈ ಹಾಗೂ ಸ್ಮಿತ್ ಮಚ್ಚರ್‌ಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಕುಷನ್ ದೇವರಾಜ್, ಸಂಜಯ್, ಮಂಜುನಾಥ್ ಆಚಾರ್, ರಾಘವೇಂದ್ರ, ಮೂಗುಡ್ತಿ ಜನಾರ್ಧನ್ ಆಚಾರ್, ಮೂಗುಡ್ತಿ ಕಾರ್ತಿಕ್, ಆದರ್ಶ್, ದೇವರಾಜ್ ಕೆರೆಹಳ್ಳಿ, ಮಂಜುನಾಥ್ ಗಾಂಧಿನಗರ, ಪಿ. ರಮೇಶ್, ರಾಮಚಂದ್ರ, ಶ್ರೀನಿವಾಸ್ ಆಚಾರ್, ಮಹಿಳಾ ಪ್ರಮುಖರಾದ ಪದ್ಮಾ ಸುರೇಶ್, ರೇಖಾ ರವಿ, ನಾಗರತ್ನ ದೇವರಾಜ್, ಶೈಲಾಪ್ರಭು, ಸುಶೀಲಮ್ಮ, ಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!