ರಿಪ್ಪನ್ ಪೇಟೆ : ಶ್ರಾವಣ ಮಾಸದ ಎರಡನೇ ಸಂಪತ್ ಶುಕ್ರವಾರದ ಅಂಗವಾಗಿ ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ ಜೈನ ಮಠದಲ್ಲಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಅಭೀಷ್ಟವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವರಮಹಾಲಕ್ಷ್ಮೀ ಪೂಜೆ ಭಕ್ತಿಭಾವದಿಂದ ನೆರವೇರಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಮಂಗಲ ಪ್ರವಚನ ನೀಡಿ, “ಅಷ್ಟವಿಧ ಪೂಜಾ ವಿಧಾನದಿಂದ ಧಾರ್ಮಿಕ ವಾತಾವರಣ ನಿರ್ಮಾಣವಾಗುತ್ತದೆ.
ತ್ರಿಕರಣಪೂರ್ವಕ ಶ್ರದ್ಧೆ ಮತ್ತು ಭಕ್ತಿಯಿಂದ ಬದುಕಿದರೆ ಜೀವನ ಪಾವನವಾಗುತ್ತದೆ” ಎಂದು ಸಂದೇಶ ನೀಡಿದರು. ವರೂರು ಜೈನ ಕ್ಷೇತ್ರದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿಗಳು ಸಹ ಉಪಸ್ಥಿತರಿದ್ದರು. ಪೂಜೆಯಲ್ಲಿ ಊರ–ಪರವೂರಿನ ಭಕ್ತರು ಉಡಿ, ಸೀರೆ, ಹರಕೆ ಹಾಗೂ ಕಾಣಿಕೆ ಸಮರ್ಪಿಸಿ ಕುಟುಂಬದ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಹೂವು, ಹಣ್ಣು ಮತ್ತು ವಿವಿಧ ನೈವೇದ್ಯಗಳನ್ನು ಅರ್ಪಿಸಿದ ಬಳಿಕ ಶ್ರೀಗಳವರು ಶ್ರೀಫಲ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಶ್ರೀ ನೇಮಿನಾಥ, ಮಹಾವೀರ, ಆದಿನಾಥ, ಕೂಷ್ಮಾಂಡಿನಿ ದೇವಿ, ಸರಸ್ವತಿ ದೇವಿ, ಕ್ಷೇತ್ರಪಾಲ ಹಾಗೂ ನಾಗಸನ್ನಿಧಿಗಳಲ್ಲಿ ಸಂಪ್ರದಾಯಬದ್ಧ ಪೂಜೆಗಳು ನೆರವೇರಿದವು.
ಪೂಜಾ ಹಾಗೂ ಅನ್ನದಾನ ಸೇವೆಯನ್ನು ಅಭಿನಂದನ್ ಪಾಟೀಲ್, ಉತ್ತಮ್ ಪಾಟೀಲ್ ಮತ್ತು ಅರಿಹಂತ ಪರಿವಾರ ವಹಿಸಿಕೊಂಡಿದ್ದರು. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ದರ್ಶನ ಪಡೆದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗದುಮ್ಮ ಹಾಗೂ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಭಕ್ತರನ್ನು ಸ್ವಾಗತಿಸಿದರು.

















Leave a Reply