ಶಿವಮೊಗ್ಗ: ನಗರದ ಸೋಗಾನೆ ಪ್ರದೇಶದಲ್ಲಿರುವ ವಿಮಾನ ನಿಲ್ದಾಣದೊಳಗೆ ಕರಡಿ ನುಗ್ಗಿದ ಘಟನೆ ಮಾ. 30 ಸೋಮವಾರ ಬೆಳಿಗ್ಗೆ ಆತಂಕ ಮೂಡಿಸಿತು. ಆಹಾರ ಅರಸುತ್ತ ಬಂದಿದ್ದ ಕರಡಿ ಮೊದಲಿಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕಾಣಿಸಿಕೊಂಡಿದ್ದು, ಬಳಿಕ ನಿಲ್ದಾಣದ ಕಾಂಪೌಂಡ್ ಒಳಗೆ ಪ್ರವೇಶಿಸಿರುವುದು ದೃಢಪಟ್ಟಿದೆ.
ಸ್ಥಳೀಯ ನಿವಾಸಿಗಳು ಕರಡಿ ಮನೆಗಳ ಸುತ್ತ ಹಾಗೂ ತೋಟಗಳಲ್ಲಿ ಓಡಾಡುತ್ತಿರುವ ದೃಶ್ಯಗಳನ್ನು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಿದ್ದಾರೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಆರಂಭಿಸಿದರು.

ವಿಮಾನ ನಿಲ್ದಾಣದ ಆವರಣದಲ್ಲಿ ದಟ್ಟ ಪೊದೆಗಳು ಬೆಳೆದಿರುವುದರಿಂದ ಕರಡಿ ಅಲ್ಲಿ ಅಡಗಿ ಕುಳಿತಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದರು. ಇದರಿಂದಾಗಿ ಸಿಬ್ಬಂದಿ ಸೋಗಾನೆ ವಿಮಾನ ನಿಲ್ದಾಣ ಹಾಗೂ ವಿನಾಯಕ ನಗರ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು.
ಸ್ಥಳೀಯರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಕರಡಿ ಕಾಂಪೌಂಡ್ ಹಾರಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕುತೂಹಲಕ್ಕೂ ಕಾರಣವಾಯಿತು.
ಕೊನೆಗೂ ಅರಣ್ಯ ಇಲಾಖೆಯ ತಂಡ ಟ್ರಾಂಕ್ವಿಲೈಸರ್ ಡಾರ್ಟ್ ಬಳಸಿ ಕರಡಿಯನ್ನು ಶಾಂತಗೊಳಿಸಿ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು.
ವನ್ಯಜೀವಿ ಪಶುವೈದ್ಯ ಡಾ. ಮುರಳಿ ಮನೋಹರ್ ಮಾತನಾಡಿ, “ಕರಡಿಗೆ ಸುಮಾರು 7ರಿಂದ 8 ವರ್ಷ ವಯಸ್ಸಿದ್ದು, ಆರೋಗ್ಯ ಉತ್ತಮವಾಗಿದೆ” ಎಂದು ತಿಳಿಸಿದ್ದಾರೆ.















Leave a Reply