ರಿಪ್ಪನ್‌ಪೇಟೆ: ಬಸ್ ನಿಲ್ದಾಣದಲ್ಲಿ ನವಜಾತ ಶಿಶುವನ್ನು ತ್ಯಜಿಸಿದ್ದ ಪ್ರಕರಣ ಭೇದಿಸಿದ ಪೊಲೀಸರು; ಸಾಗರದ ಯುವಕ-ಯುವತಿ ವಶಕ್ಕೆ

Add a heading 20260711 234826 0000 ರಿಪ್ಪನ್‌ಪೇಟೆ: ಬಸ್ ನಿಲ್ದಾಣದಲ್ಲಿ ನವಜಾತ ಶಿಶುವನ್ನು ತ್ಯಜಿಸಿದ್ದ ಪ್ರಕರಣ ಭೇದಿಸಿದ ಪೊಲೀಸರು; ಸಾಗರದ ಯುವಕ-ಯುವತಿ ವಶಕ್ಕೆ
Spread the love

ರಿಪ್ಪನ್‌ಪೇಟೆ: ಒಂದು ವಾರದ ಹಿಂದೆ ರಿಪ್ಪನ್‌ಪೇಟೆ ಸಮೀಪದ ಗವಟೂರು ಹೊಳೆ ಬಳಿಯ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಪತ್ತೆಯಾಗಿದ್ದ ನವಜಾತ ಹೆಣ್ಣು ಶಿಶುವಿನ ಪ್ರಕರಣವನ್ನು ಭೇದಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಂತ್ರಿಕ ಮಾಹಿತಿ ಮತ್ತು ನಿಖರ ತನಿಖೆಯ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಮೂಲದ 21 ವರ್ಷದ ಯುವತಿ ಹಾಗೂ 20 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯಾವುದೇ ಸ್ಪಷ್ಟ ಸುಳಿವು ಇಲ್ಲದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ನೇತೃತ್ವದ ತಂಡ ತಕ್ಷಣವೇ ತನಿಖೆ ಆರಂಭಿಸಿತು. ಕೃತ್ಯ ನಡೆದ ಸ್ಥಳದ ಮೊಬೈಲ್ ಟವರ್ ಡಂಪ್ (Tower Dump) ಡೇಟಾವನ್ನು ವಿಶ್ಲೇಷಿಸಿ, ತಾಂತ್ರಿಕ ಸಾಕ್ಷ್ಯಗಳು ಹಾಗೂ ರಹಸ್ಯ ಮಾಹಿತಿ ಆಧರಿಸಿ ತನಿಖೆಯನ್ನು ಮುಂದುವರಿಸಲಾಯಿತು.

ಈ ತನಿಖೆಯ ವೇಳೆ ಸಾಗರ ಮೂಲದ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನವಜಾತ ಶಿಶುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ತೆರಳಿರುವುದಾಗಿ ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಪ್ರಾಥಮಿಕ ತನಿಖೆ ಪೂರ್ಣಗೊಂಡಿದ್ದು, ಶಿಶುವಿನ ತಾಯಿಯನ್ನು ರಕ್ಷಣೆ ಮತ್ತು ಆರೈಕೆಗಾಗಿ ಸುರಭಿ ಕೇಂದ್ರಕ್ಕೆ ರವಾನಿಸಲಾಗಿದೆ. ಶಿಶುವನ್ನು ತ್ಯಜಿಸಲು ಕಾರಣವಾದ ಸಂದರ್ಭಗಳು, ಘಟನೆಗೆ ಸಂಬಂಧಿಸಿದ ಇತರ ಅಂಶಗಳು ಹಾಗೂ ಪ್ರಕರಣದ ಸಂಪೂರ್ಣ ಹಿನ್ನೆಲೆಯ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಯಾವುದೇ ಸುಳಿವಿಲ್ಲದ ಪ್ರಕರಣವನ್ನು ತಾಂತ್ರಿಕ ಮಾಹಿತಿ, ಟವರ್ ಡಂಪ್ ವಿಶ್ಲೇಷಣೆ ಮತ್ತು ರಹಸ್ಯ ಮಾಹಿತಿಯ ನೆರವಿನಿಂದ ಭೇದಿಸಿರುವ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆಯ ಹಿನ್ನಲೆ 👆

Leave a Reply

Your email address will not be published. Required fields are marked *