ಕಸ್ತೂರಿ ರಂಗನ್ ಅಧಿಸೂಚನೆ ಮಲೆನಾಡಿನ ಹಳ್ಳಿಗರ ಮೇಲಿನ ದೌರ್ಜನ್ಯ: ಚಂದ್ರಮೌಳಿ ಗೌಡ| ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ!

Addaheading 20260808 145130 0000 ಕಸ್ತೂರಿ ರಂಗನ್ ಅಧಿಸೂಚನೆ ಮಲೆನಾಡಿನ ಹಳ್ಳಿಗರ ಮೇಲಿನ ದೌರ್ಜನ್ಯ: ಚಂದ್ರಮೌಳಿ ಗೌಡ| ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ!
Spread the love

ಹೊಸನಗರ: ಮಲೆನಾಡು ಪ್ರದೇಶದ ಹಳ್ಳಿಗಳನ್ನು ಕಸ್ತೂರಿ ರಂಗನ್ ವರದಿ ಅನ್ವಯ ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಸ್ಥಳೀಯರ ಅಭಿಪ್ರಾಯ ಪಡೆಯದೆ ಕೈಗೊಂಡ ಏಕಪಕ್ಷೀಯ ನಿರ್ಧಾರವಾಗಿದೆ. ಇದು ಮಲೆನಾಡಿನ ಹಳ್ಳಿಗರ ಮೇಲೆ ಕೇಂದ್ರ ಸರ್ಕಾರ ಹೇರಿರುವ ದೌರ್ಜನ್ಯ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ ಆರೋಪಿಸಿದರು.
ಹೊಸನಗರದ ಕಾಂಗ್ರೆಸ್ ಕಚೇರಿ ಗಾಂಧಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2013ರಿಂದಲೂ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಮಲೆನಾಡು ಜಿಲ್ಲೆಗಳ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದಾಗ್ಯೂ ಪಶ್ಚಿಮ ಘಟ್ಟ ವ್ಯಾಪ್ತಿಯ 1,576 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಜನವಿರೋಧಿ ನೀತಿಯಾಗಿದೆ ಎಂದರು.
ಒಂದು ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಿದರೆ ಹಲವು ನಿರ್ಬಂಧಗಳು ಎದುರಾಗಲಿವೆ. ಕೃಷಿ ಚಟುವಟಿಕೆಗಳಲ್ಲಿ ಯಂತ್ರೋಪಕರಣಗಳ ಬಳಕೆಗೆ ಕಡಿವಾಣ ಬೀಳಬಹುದು. ಜಾನುವಾರುಗಳ ಓಡಾಟಕ್ಕೂ ನಿರ್ಬಂಧ ಎದುರಾಗುವ ಸಾಧ್ಯತೆ ಇದೆ. ಇದರಿಂದ ಜನರು, ಜಾನುವಾರುಗಳು ಹಾಗೂ ಗ್ರಾಮಗಳ ಅಭಿವೃದ್ಧಿಗೆ ತಡೆ ಉಂಟಾಗಲಿದೆ ಎಂದು ಅವರು ಹೇಳಿದರು.

file 0000000099cc82119ed5f6fe1ce018065743306832363379841 ಕಸ್ತೂರಿ ರಂಗನ್ ಅಧಿಸೂಚನೆ ಮಲೆನಾಡಿನ ಹಳ್ಳಿಗರ ಮೇಲಿನ ದೌರ್ಜನ್ಯ: ಚಂದ್ರಮೌಳಿ ಗೌಡ| ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ!


   ಈಗಾಗಲೇ ಅರಣ್ಯ ಇಲಾಖೆಯ ಅತಿರೇಕದ ಕ್ರಮಗಳಿಂದ ಮಲೆನಾಡಿನ ಗ್ರಾಮೀಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಭಾವನೆಗಳೊಂದಿಗೆ ಕೇಂದ್ರ ಸರ್ಕಾರ ಚಲ್ಲಾಟವಾಡುವುದನ್ನು ನಿಲ್ಲಿಸಿ, ಕಸ್ತೂರಿ ರಂಗನ್ ವರದಿ ಕುರಿತು ರೈತರು ಹಾಗೂ ಸ್ಥಳೀಯ ಜನರೊಂದಿಗೆ ಸಮಗ್ರ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಚಂದ್ರಮೌಳಿ ಗೌಡ ಆಗ್ರಹಿಸಿದರು.

8hnr1photo9079727143233729544 ಕಸ್ತೂರಿ ರಂಗನ್ ಅಧಿಸೂಚನೆ ಮಲೆನಾಡಿನ ಹಳ್ಳಿಗರ ಮೇಲಿನ ದೌರ್ಜನ್ಯ: ಚಂದ್ರಮೌಳಿ ಗೌಡ| ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ!

ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ

  ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸಾಗರದಲ್ಲಿ ಪ್ರತಿಭಟನೆ ನಡೆಸುವ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬಿಜೆಪಿ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ ಹಾಗೂ ಬಿಜೆಪಿಯ ಮುಖಂಡರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿರುವುದನ್ನು ಚಂದ್ರಮೌಳಿ ಗೌಡ ಖಂಡಿಸಿದರು.

  “ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಬೇಕು. ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಸರಿಹೊಂದುವುದಿಲ್ಲ. ಅವರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ” ಎಂದು ಸವಾಲು ಹಾಕಿದರು.
ಎಲ್ಲ ಶಾಸಕರಿಗೂ ಸಚಿವರಾಗುವ ಆಸೆ ಇರುತ್ತದೆ
ಬೇಳೂರು ಗೋಪಾಲಕೃಷ್ಣ ಅವರು ಒಂದೂವರೆ ತಿಂಗಳಿಂದ ಕ್ಷೇತ್ರಕ್ಕೆ ಬಂದಿಲ್ಲ, ಸಚಿವರಾಗುವ ಲಾಬಿಗಾಗಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಕುಳಿತಿದ್ದಾರೆ ಎಂಬ ಮಾಜಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ಕ್ಷೇತ್ರಕ್ಕೆ ಬಂದು ಹೋಗುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಆಪ್ತ ಕಾರ್ಯದರ್ಶಿಗಳ ಮೂಲಕ ಅಧಿಕಾರಿಗಳೊಂದಿಗೆ ಪ್ರತಿದಿನ ಸಂಪರ್ಕದಲ್ಲಿದ್ದಾರೆ ಎಂದರು.


    ಕ್ಷೇತ್ರದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ಪಂದಿಸುತ್ತಿದ್ದಾರೆ. ಅಲ್ಲದೆ, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಸ್ವಂತ ಹಣದಿಂದಲೂ ಆಪ್ತ ಕಾರ್ಯದರ್ಶಿಗಳ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ತಲುಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಶಾಸಕರು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಅಧಿಕಾರಿಗಳ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. “ಯಾವ ಶಾಸಕರು ಮಾಡದ ಕೆಲಸವನ್ನು ನಮ್ಮ ಶಾಸಕರು ಮಾಡಿ ತೋರಿಸಿದ್ದಾರೆ” ಎಂದು ಚಂದ್ರಮೌಳಿ ಗೌಡ ಹೇಳಿದರು.
   ಭಾರತ್ ಜೋಡೋ ಯುವಕ ಸಂಘಕ್ಕೆ ಸೇರ್ಪಡೆಯಾಗಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಭಾರತ್ ಜೋಡೋ ಯುವಕ ಸಂಘವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ ಎಂದು ಚಂದ್ರಮೌಳಿ ಗೌಡ ತಿಳಿಸಿದರು.
   ಒಂದು ಗ್ರಾಮದಿಂದ 100ಕ್ಕೂ ಹೆಚ್ಚು ಯುವಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ₹10 ಶುಲ್ಕ ಪಾವತಿಸುವ ಮೂಲಕ ಸದಸ್ಯರಾಗಬಹುದು. ಪ್ರತಿ ಗ್ರಾಮಕ್ಕೆ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದಿಂದ ಮೂರು ಕಂತುಗಳಲ್ಲಿ ₹10 ಲಕ್ಷದವರೆಗೆ ಅನುದಾನ ನೀಡುವ ಉದ್ದೇಶವಿದೆ ಎಂದು ಅವರು ಹೇಳಿದರು.
ಈ ಅನುದಾನವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಆದ್ದರಿಂದ ಯುವಕರು ಇಂದಿನಿಂದಲೇ ಸದಸ್ಯತ್ವ ಪಡೆದು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ
ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸಿಕೊಂಡು ಅವರಿಗೆ ಹಣ ಪಾವತಿಸದೆ ಬಾಕಿ ಉಳಿಸಿತ್ತು. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ನೂರಾರು ಕೋಟಿ ರೂಪಾಯಿ ಗುತ್ತಿಗೆದಾರರಿಗೆ ಬಾಕಿ ಇತ್ತು. ಆ ಬಾಕಿ ಹಣವನ್ನು ಹಂತ ಹಂತವಾಗಿ ಪಾವತಿಸಲಾಗುತ್ತಿದೆ ಎಂದು ಚಂದ್ರಮೌಳಿ ಗೌಡ ಹೇಳಿದರು.
“ಹಿಂದಿನ ಸರ್ಕಾರದ ಸಾಲವನ್ನು ತೀರಿಸುವುದರ ಜೊತೆಗೆ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರದ ವಿರುದ್ಧ ದೂರುವ ನೈತಿಕ ಹಕ್ಕು ಯಾರಿಗೂ ಇಲ್ಲ” ಎಂದು ಅವರು ಹೇಳಿದರು.


ಬುದ್ಧಿವಂತ ಮಾಜಿ ಸಚಿವರ ಬಾಯಿಯಲ್ಲಿ ಇಂತಹ ಮಾತುಗಳು ಸಲ್ಲ: ಚಿದಂಬರ
   ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಪಿ. ಚಿದಂಬರ, “ನಾನೇ ಬುದ್ಧಿವಂತ, ನನ್ನನ್ನು ಬಿಟ್ಟರೆ ರಾಜ್ಯದಲ್ಲಿ, ದೇಶದಲ್ಲಿ ಯಾರೂ ಇಲ್ಲ ಎಂಬ ರೀತಿಯಲ್ಲಿ ಮಾತನಾಡುತ್ತಿರುವ ಮಾಜಿ ಸಚಿವರೇ, ನೀವು ಮೂರು ಬಾರಿ ಶಾಸಕರಾಗಿದ್ದಾಗ ಸಾಗರ-ಹೊಸನಗರ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಿದ್ದೀರಿ?” ಎಂದು ಪ್ರಶ್ನಿಸಿದರು.
   ನಿಮ್ಮ ಆಡಳಿತವನ್ನು ಜನರು ನೋಡಿದ್ದಾರೆ. ಬಡ ಜನರ ಪರವಾಗಿ ನೀವು ಯಾವ ರೀತಿಯ ಕೆಲಸ ಮಾಡಿದ್ದೀರಿ ಎಂಬುದನ್ನು ಜನರಿಗೆ ತಿಳಿದಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಸುಳ್ಳುಗಾರ ಎಂದು ಕರೆಯುವ ಯಾವುದೇ ನೈತಿಕತೆ ನಿಮಗಿಲ್ಲ ಎಂದು ಚಿದಂಬರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಪಿ. ಚಿದಂಬರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್, ಪ್ರಭಾಕರ್, ಜಯಶೀಲಪ್ಪ ಗೌಡ, ಉಬೇದುಲ್ಲಾ, ಬೃಂದಾವನ್ ಪ್ರವೀಣ್, ನೇತ್ರಾ ಸುಬ್ರಾಯ ಭಟ್, ರಾಧಿಕಾ ರತ್ನಾಕರ್ ಶ್ರೇಷ್ಠಿ, ಬಾಳೆಕೊಪ್ಪ ಗಣೇಶ್, ಲೋಕೇಶ್, ಸಂತೋಷ್ ಚಂದ್ರಮೂರ್ತಿ, ಇಕ್ಬಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

file 000000003f5c8208a0b120fec3430d9d2513528584061818444 ಕಸ್ತೂರಿ ರಂಗನ್ ಅಧಿಸೂಚನೆ ಮಲೆನಾಡಿನ ಹಳ್ಳಿಗರ ಮೇಲಿನ ದೌರ್ಜನ್ಯ: ಚಂದ್ರಮೌಳಿ ಗೌಡ| ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ!

Leave a Reply

Your email address will not be published. Required fields are marked *

error: Content is protected !!