ಹೊಸನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಿನ ಗೇರುಪುರದ ಇಂದಿರಾಗಾಂಧಿ ವಸತಿ ಶಾಲೆಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ ಐದನೇ ಬಾರಿ ಶೇ. 100ರಷ್ಟು ಫಲಿತಾಂಶ ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿದೆ.
ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು 50 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ. ಇವರಲ್ಲಿ 27 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡರೆ, 23 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲರಾದ ಯೋಗೇಶ್ ಎಚ್ ಹೆಬ್ಬಲಗೆರೆ ಮಾಹಿತಿ ನೀಡಿದ್ದಾರೆ.
ಗ್ರೇಡ್‌ವಾರು ಸಾಧನೆಯಲ್ಲಿ 14 ವಿದ್ಯಾರ್ಥಿಗಳು A+ ಗ್ರೇಡ್, 22 ಮಂದಿ A ಗ್ರೇಡ್, 9 ಮಂದಿ B+ ಹಾಗೂ 5 ಮಂದಿ B ಗ್ರೇಡ್ ಗಳಿಸಿದ್ದಾರೆ.

ಶಾಲೆಯ ಟಾಪರ್ ಚೈತ್ರ ಎಂ 601 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ತರುಣ್ ವೈ ಹಾಗೂ ಭುವನ್ ಎಸ್ ತಲಾ 594 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅಮಿತ್ ಜಿ ಈ 593 ಅಂಕಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ವಿಷಯವಾರು ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳಲ್ಲು ಕನ್ನಡದಲ್ಲಿ ತರುಣ್ ವೈ ಮತ್ತು ರಕ್ಷಿತಾ ಬಿ.ಎಸ್., ಹಿಂದಿಯಲ್ಲಿ ಉಲ್ಲಾಸ್, ದೀಕ್ಷಿತಾ ಬಿ. ಮತ್ತು ಭುವನ್ ಎಸ್ ಹಾಗೂ ಸಮಾಜ ವಿಜ್ಞಾನದಲ್ಲಿ ಮನ್ವಿತಾ ಜಿ 100/100 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಸತತ ಐದು ವರ್ಷಗಳಿಂದಲೂ ಶೇ. 100 ಫಲಿತಾಂಶ ದಾಖಲಿಸುತ್ತಿರುವ ಈ ಶಾಲೆಯ ಸಾಧನೆಗೆ ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ಶ್ರಮ ಹಾಗೂ ಪಾಲಕರ ಸಹಕಾರವೇ ಕಾರಣ ಎಂದು ಶಾಲಾ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಮಕ್ಕಳ ಈ ಶೈಕ್ಷಣಿಕ ಸಾಧನೆಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು ನಿಮ್ಮ ಸಾಧನೆ ಮತ್ತಷ್ಟು ಮುಂದುವರೆಯಲಿ ಎಂದು ಹಾರೈಸುತ್ತೇವೆ.
ಸಾಧನ NEET-2026ಕ್ಕೆ ಆಯ್ಕೆ: ಗೇರುಪುರ ಶಾಲೆಯ ಚೈತ್ರ ಎಂಗೆ ಮತ್ತೊಂದು ಹೆಮ್ಮೆ
ಹೊಸನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಗೇರುಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಚೈತ್ರ ಎಂ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಮತ್ತೊಂದು ಹೆಮ್ಮೆಯ ಮೈಲುಗಲ್ಲು ಸಾಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಸುಂಟರಹಳ್ಳಿ ಗ್ರಾಮದ ಮಹೇಶ್ ಅವರ ಪುತ್ರಿಯಾದ ಚೈತ್ರ ಎಂ, ಬಡತನ ಮತ್ತು ಅನಾರೋಗ್ಯ ಪೀಡಿತ ತಾಯಿಯ ಸಂಕಷ್ಟಗಳ ನಡುವೆಯೂ ಅಪಾರ ಪರಿಶ್ರಮ, ಏಕಾಗ್ರತೆ ಮತ್ತು ಶಿಸ್ತಿನಿಂದ ಅಭ್ಯಾಸ ಮಾಡಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ರಾಷ್ಟ್ರೋತ್ಥಾನ ಸಂಸ್ಥೆ ನಡೆಸಿದ ನಾಲ್ಕು ಹಂತಗಳ ವಿವಿಧ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣಳಾದ ಅವರು, ಸಾಧನ NEET 2026-88 ಯೋಜನೆಯಡಿ ಉಚಿತ ಪಿಯುಸಿ ಶಿಕ್ಷಣಕ್ಕಾಗಿ ಆಯ್ಕೆಯಾಗಿದ್ದಾರೆ. ಈ ಸಾಧನೆಯ ಮೂಲಕ ಶಾಲೆಗೂ, ಕುಟುಂಬಕ್ಕೂ ಕೀರ್ತಿ ತಂದಿದ್ದಾರೆ.
ಚೈತ್ರ ಅವರ ಸಾಧನೆಗೆ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಚ್ ಹೆಬ್ಬಳಗೆರೆ ಹಾಗೂ ಶಿಕ್ಷಕ ವೃಂದ ಅಭಿನಂದನೆಗಳನ್ನು ಸಲ್ಲಿಸಿ, ಭವಿಷ್ಯದಲ್ಲಿಯೂ ಇಂತಹ ಇನ್ನಷ್ಟು ಸಾಧನೆಗಳನ್ನು ಮಾಡಲು ಶುಭ ಹಾರೈಸಿದ್ದಾರೆ.
ಇದೇ ವೇಳೆ, ನಾಡಿ ಮೀಡಿಯಾ ಹೌಸ್ ವತಿಯಿಂದಲೂ ಚೈತ್ರ ಎಂ ಅವರ ಈ ಅದ್ವಿತೀಯ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಗಿದ್ದು, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಲಾಗಿದೆ.


















Leave a Reply