ಹೊಸನಗರ: ಇಡಿ, ಐಟಿ, ಸಿಬಿಐ ಸಂಸ್ಥೆಗಳ ರಾಜಕೀಯ ಬಳಕೆ ಆರೋಪ; ಅ.12ರಂದು ಧರಣಿ

Addaheading 20261009 191403 0000 ಹೊಸನಗರ: ಇಡಿ, ಐಟಿ, ಸಿಬಿಐ ಸಂಸ್ಥೆಗಳ ರಾಜಕೀಯ ಬಳಕೆ ಆರೋಪ; ಅ.12ರಂದು ಧರಣಿ
Spread the love

ಹೊಸನಗರ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಸಿಬಿಐ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಾಗವಾರ ಬಣವು, ಈ ಕ್ರಮವನ್ನು ಖಂಡಿಸಿ ಅಕ್ಟೋಬರ್ 12ರ ಸೋಮವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿದೆ ಎಂದು ಜಿಲ್ಲಾ ಸಂಚಾಲಕ ಅರಳಿಸುರಳಿ ನಾಗರಾಜ್ ತಿಳಿಸಿದರು.

ಹೊಸನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಬಿಜೆಪಿತೇರ ವಿರೋಧ ಪಕ್ಷಗಳ ಜನಪ್ರತಿನಿಧಿಗಳ ಮೇಲೆ ಇಡಿ, ಐಟಿ ಮತ್ತು ಸಿಬಿಐ ಸಂಸ್ಥೆಗಳ ಮೂಲಕ ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಈ ಮೂಲಕ ವಿರೋಧ ಪಕ್ಷಗಳ ನಾಯಕರ ರಾಜಕೀಯ ಬಲ ಕುಗ್ಗಿಸುವುದರ ಜತೆಗೆ, ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಿ ಅಧಿಕಾರ ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ತಮ್ಮ ಸಂಘಟನೆಯ ನಿಲುವಾಗಿದೆ ಎಂದು ಹೇಳಿದರು.

ವಿರೋಧ ಪಕ್ಷಗಳ ನಾಯಕರ ವಿರುದ್ಧ ನಡೆದಿರುವ ದಾಳಿಗಳಲ್ಲಿ ಶೇ.96ರಷ್ಟು ಪ್ರಕರಣಗಳು ರಾಜಕೀಯ ಉದ್ದೇಶ ಹೊಂದಿವೆ ಎಂಬ ಅಂಶವನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ಅವರು ಉಲ್ಲೇಖಿಸಿದರು. ಇತ್ತೀಚೆಗೆ ಕರ್ನಾಟಕದ ದಲಿತ ಸಮುದಾಯದ ಸಚಿವರೊಬ್ಬರ ಮೇಲೆ ನಡೆದ ಇಡಿ ದಾಳಿಯನ್ನೂ ಈ ಹಿನ್ನೆಲೆಯಲ್ಲಿ ಗಮನಿಸಬೇಕಿದೆ ಎಂದು ತಿಳಿಸಿದರು.

ಈ ರೀತಿಯ ಕ್ರಮಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಅಕ್ಟೋಬರ್ 12ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಧರಣಿಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ನಾಗರಾಜ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂದೇಶ ಮತ್ತಿಮನೆ, ನಾರಾಯಣ, ಸುಬ್ರಹ್ಮಣ್ಯ, ಚಂದ್ರಣ್ಣ, ಮಾಲತೇಶ್, ಸುನೀಲ್, ಗಣೇಶ್, ವಿಠಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!