ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ – ಡಾ. ರವೀಶ್ ಎನ್. ಎಸ್

Screenshot 20260513 155654 Canva ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ - ಡಾ. ರವೀಶ್ ಎನ್. ಎಸ್
Spread the love

img 20260110 wa00007803559315861458129 ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ - ಡಾ. ರವೀಶ್ ಎನ್. ಎಸ್

ಬರಹ : ಡಾ. ರವೀಶ ಎನ್. ಎಸ್
ಭಾರತೀಯ ಸಂಸ್ಕೃತಿಯಲ್ಲಿ ಸಂಪತ್ತು ಎಂದರೆ ಕೇವಲ ವೈಯಕ್ತಿಕ ಐಶ್ವರ್ಯವಲ್ಲ; ಅದು ‘ಲಕ್ಷ್ಮಿ’ಯ ರೂಪ. ಆದರೆ ಆ ಸಂಪತ್ತು ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂಬುದೇ ನಮ್ಮ ಸನಾತನ ಆರ್ಥಿಕ ತತ್ವದ ಮೂಲಸಾರ. ರಾಮಾಯಣದಲ್ಲಿ ಸೀತಾದೇವಿಯು ಕಾಂಚನ ಮೃಗದ ಹೊಳಪಿಗೆ ಮರುಳಾಗಿ ಅದನ್ನು ಪಡೆಯಬೇಕೆಂದು ಬಯಸಿದಾಗ, ಸಾಕ್ಷಾತ್ ಶ್ರೀರಾಮನೇ ಅದರ ಬೆನ್ನತ್ತಿ ಅರಣ್ಯಕ್ಕೆ ತೆರಳಬೇಕಾಯಿತು. ಆ ಒಂದು ಕ್ಷಣಿಕ ಮೋಹವೇ ರಾಮಾಯಣದ ಮಹಾಸಂಗ್ರಾಮಕ್ಕೆ ನಾಂದಿಯಾಯಿತು. ಇಂದಿನ ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ, ಚಿನ್ನದ ಮೇಲಿನ ಅತಿಯಾದ ವ್ಯಾಮೋಹವೂ ಇದೇ ರೀತಿಯ ಆಧುನಿಕ “ಮಾಯಾ ಜಿಂಕೆ”ಯಾಗಿದೆ. ಹೊಳೆಯುವ ಬಂಗಾರವು ವ್ಯಕ್ತಿಯ ಭದ್ರತೆಯ ಸಂಕೇತವಾಗಬಹುದು; ಆದರೆ ಅದರಿಂದಾಗಿ ದೇಶದ ಅಮೂಲ್ಯ ವಿದೇಶಿ ವಿನಿಮಯ ಸಂಪತ್ತು ಹೊರಹೋಗುವಾಗ, ಅದು ರಾಷ್ಟ್ರದ ಆರ್ಥಿಕ ಸ್ವಾವಲಂಬನೆಗೆ ಹೊಡೆತ ನೀಡುತ್ತದೆ.

Follow Our Instagram Page:    https://www.instagram.com/naadinews?igsh=MTl2cjdmNXBxY2d4Mw==

img 20260428 wa00468050181411412133914 ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ - ಡಾ. ರವೀಶ್ ಎನ್. ಎಸ್



ಅಯೋಧ್ಯಾಕಾಂಡದಲ್ಲಿಯೂ ಶ್ರೀರಾಮನು ಭರತನಿಗೆ ನೀಡುವ ಉಪದೇಶಗಳಲ್ಲಿ ಆರ್ಥಿಕ ನೈತಿಕತೆಯ ಸ್ಪಷ್ಟ ಚಿತ್ರಣ ಕಾಣಿಸುತ್ತದೆ. ಭರತನು ರಾಜ್ಯಭಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಶ್ರೀರಾಮನು ಅನೇಕ ಪ್ರಶ್ನೆಗಳ ಮೂಲಕ ರಾಜಧರ್ಮವನ್ನು ನೆನಪಿಸುತ್ತಾನೆ. ಅದರಲ್ಲಿ ಗೋಸಂಪತ್ತಿನ ರಕ್ಷಣೆಯ ಬಗ್ಗೆ ವಿಶೇಷವಾಗಿ ಪ್ರಶ್ನಿಸುತ್ತಾನೆ -“ಗೋವುಗಳನ್ನು ಸಮರ್ಪಕವಾಗಿ ಕಾಯಲಾಗುತ್ತಿದೆಯೇ? ಕೃಷಿ ಮತ್ತು ಪಶುಸಂಪತ್ತು ಸಮೃದ್ಧವಾಗಿದೆಯೇ?” ಎಂಬ ಅರ್ಥದ ಉಪದೇಶ ನೀಡುತ್ತಾನೆ. ಇಲ್ಲಿ “ಗೋವು” ಎನ್ನುವುದು ಕೇವಲ ಹಸು ಅಥವಾ ಪಶುಸಂಪತ್ತಿನ ಸೀಮಿತ ಅರ್ಥದಲ್ಲಿಲ್ಲ; ಅದು ಸಮಾಜಕ್ಕೆ ಉತ್ಪಾದನೆ ನೀಡುವ ಸಂಪನ್ಮೂಲಗಳ ಪ್ರತೀಕವಾಗಿದೆ. ಕೃಷಿ, ಪಶುಸಂಗೋಪನೆ, ಜಲಸಂಪತ್ತು, ವ್ಯಾಪಾರ, ಕೈಗಾರಿಕೆ, ಮಾನವ ಸಂಪನ್ಮೂಲ – ಇವೆಲ್ಲವೂ ರಾಷ್ಟ್ರದ ಜೀವಂತ ಆರ್ಥಿಕ ಶಕ್ತಿಗಳಾಗಿವೆ ಎಂಬ ಸಂದೇಶವನ್ನು ರಾಮಾಯಣವು ಸಾಂಕೇತಿಕವಾಗಿ ನೀಡುತ್ತದೆ. ಅಂದರೆ ಶ್ರೀರಾಮನ ದೃಷ್ಟಿಯಲ್ಲಿ “ಉತ್ಪಾದಕ ಆರ್ಥಿಕತೆ”ಯೇ ರಾಮರಾಜ್ಯದ ಮೂಲತತ್ವ. ಅನಾವಶ್ಯಕ ವೈಭವ, ಸಂಗ್ರಹ ಮತ್ತು ನಿರ್ಜೀವ ಸಂಪತ್ತಿಗಿಂತ ಸಮಾಜಕ್ಕೆ ಮೌಲ್ಯ ಸೃಷ್ಟಿಸುವ ಸಂಪನ್ಮೂಲಗಳೇ ನಿಜವಾದ ರಾಷ್ಟ್ರಸಂಪತ್ತು ಎಂಬುದನ್ನು ರಾಮಾಯಣವೇ ಬಹಳ ಸೂಕ್ಷ್ಮವಾಗಿ ಬೋಧಿಸುತ್ತದೆ.

img 20260427 wa00131675797232986992457 ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ - ಡಾ. ರವೀಶ್ ಎನ್. ಎಸ್

ಆರ್ಥಿಕ ದೃಷ್ಟಿಯಿಂದ ನೋಡಿದರೆ, “ಉತ್ಪಾದಕ ಆಸ್ತಿ” ಎಂದರೆ ಸಮಾಜ ಮತ್ತು ಆರ್ಥಿಕತೆಗೆ ನಿರಂತರ ಮೌಲ್ಯ ಸೃಷ್ಟಿಸುವ ಸಂಪನ್ಮೂಲಗಳು. ಕೃಷಿಭೂಮಿ ಆಹಾರ ಉತ್ಪಾದಿಸುತ್ತದೆ; ಕಾರ್ಖಾನೆಗಳು ವಸ್ತುಗಳನ್ನು ನಿರ್ಮಿಸುತ್ತವೆ; ಯಂತ್ರೋಪಕರಣಗಳು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ; ಶಿಕ್ಷಣ ಮತ್ತು ಕೌಶಲ್ಯ ಮಾನವ ಸಂಪನ್ಮೂಲವನ್ನು ಬಲಪಡಿಸುತ್ತವೆ; ತಂತ್ರಜ್ಞಾನ ಮತ್ತು ಮೂಲಸೌಕರ್ಯ ದೇಶದ ಸ್ಪರ್ಧಾತ್ಮಕತೆಯನ್ನು ವೃದ್ಧಿಸುತ್ತವೆ. ಇವುಗಳೆಲ್ಲವೂ ಉದ್ಯೋಗ ಸೃಷ್ಟಿಸಿ, ಆದಾಯ ಹೆಚ್ಚಿಸಿ, ರಾಷ್ಟ್ರದ ಜಿಡಿಪಿಗೆ ಕೊಡುಗೆ ನೀಡುವ ಉತ್ಪಾದಕ ಆಸ್ತಿಗಳಾಗಿವೆ. ಆದರೆ ಚಿನ್ನವು ಬಹುಪಾಲು ಸಂದರ್ಭಗಳಲ್ಲಿ ಉತ್ಪಾದಕ ಆಸ್ತಿ ಅಲ್ಲ. ಅದು ಲಾಕರ್‌ಗಳಲ್ಲಿ, ಬ್ಯಾಂಕ್‌ಗಳ ವಾಲ್ಟ್‌ಗಳಲ್ಲಿ ಅಥವಾ ಮನೆಯ ಅಲಮಾರಿಗಳಲ್ಲಿ “ನಿರ್ಜೀವ ಆಸ್ತಿ”ಯಾಗಿ ಉಳಿಯುತ್ತದೆ. ಅದರಿಂದ ಹೊಸ ಉತ್ಪಾದನೆ, ಉದ್ಯೋಗ ಅಥವಾ ಆರ್ಥಿಕ ಚಟುವಟಿಕೆ ಸೃಷ್ಟಿಯಾಗುವುದಿಲ್ಲ. ಆದರೆ ಅದೇ ಹಣ ಕೈಗಾರಿಕೆ, ಕೃಷಿ, ಮೂಲಸೌಕರ್ಯ, ಸ್ಟಾರ್ಟ್‌ಅಪ್‌ಗಳು ಅಥವಾ ಸಂಶೋಧನಾ ವಲಯಗಳಿಗೆ ಹರಿದರೆ, ಅದು ದೇಶದ ಆರ್ಥಿಕ ಚಕ್ರವನ್ನು ಚುರುಕುಗೊಳಿಸುತ್ತದೆ.



ಹಾಗಾದರೆ ಈ “ಚಿನ್ನದ ಗಣಿತ”ವೇನು? ಅಂಕಿ-ಅಂಶಗಳನ್ನು ನೋಡಿದರೆ ಪರಿಸ್ಥಿತಿಯ ತೀವ್ರತೆ ಸ್ಪಷ್ಟವಾಗುತ್ತದೆ. ಭಾರತವು 2025-26ರ ಆರ್ಥಿಕ ವರ್ಷದಲ್ಲಿ ಸುಮಾರು 72 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಈ ಪ್ರಮಾಣ ದ್ವಿಗುಣಕ್ಕಿಂತ ಹೆಚ್ಚಾಗಿದೆ. ಬೆಳ್ಳಿಯ ಆಮದು ಸೇರಿಸಿದರೆ ಸುಮಾರು 84 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ನಿಧಿ ಅಮೂಲ್ಯ ಲೋಹಗಳ ಖರೀದಿಗಾಗಿ ಹೊರಹೋಗಿದೆ. ಇದೇ ವೇಳೆ ಭಾರತವು ತನ್ನ ಅಗತ್ಯದ ಸುಮಾರು 88.6% ಕಚ್ಚಾ ತೈಲವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಒಂದು ಕಡೆ ತೈಲಕ್ಕಾಗಿ ಡಾಲರ್ ಹೊರಹೋಗುತ್ತಿದೆ; ಮತ್ತೊಂದು ಕಡೆ ಚಿನ್ನ ಮತ್ತು ಬೆಳ್ಳಿಗಾಗಿ ಡಾಲರ್ ಹೊರಹೋಗುತ್ತಿದೆ. ಪರಿಣಾಮವಾಗಿ ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತದೆ; ವಿದೇಶಿ ವಿನಿಮಯ ಮೀಸಲು ನಿಧಿ ಕರಗುತ್ತದೆ; ದೇಶದ ಆರ್ಥಿಕ ಸ್ವಾವಲಂಬನೆ ಒತ್ತಡಕ್ಕೆ ಸಿಲುಕುತ್ತದೆ.



ಭಾರತದ ಮತ್ತೊಂದು ದೊಡ್ಡ ಸವಾಲು ಎಂದರೆ ಜಾಗತಿಕ ಇಂಧನ ಅಸ್ಥಿರತೆ. ಪಶ್ಚಿಮ ಏಷ್ಯಾದ ಯುದ್ಧ, ಸಮುದ್ರ ಮಾರ್ಗಗಳಲ್ಲಿನ ಉದ್ವಿಗ್ನತೆ ಮತ್ತು ಜಾಗತಿಕ ಸರಬರಾಜು ಸರಪಳಿಯ ವ್ಯತ್ಯಯಗಳಿಂದ ತೈಲ ಸಾಗಣೆ ವೆಚ್ಚಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಯುದ್ಧಪೂರ್ವ ಸ್ಥಿತಿಗಿಂತ ಸಾಗಣೆ ಮತ್ತು ವಿಮೆ ದರಗಳು ಹಲವು ಪಟ್ಟು ಹೆಚ್ಚಾಗಿವೆ. ಇದರ ನೇರ ಪರಿಣಾಮವಾಗಿ ಭಾರತಕ್ಕೆ ಬರುವ ಪ್ರತಿಯೊಂದು ಬ್ಯಾರೆಲ್ ತೈಲದ ವೆಚ್ಚ ಹೆಚ್ಚುತ್ತಿದೆ. ತೈಲ ಬೆಲೆ ಏರಿದಾಗ ದೇಶದ ವಿದೇಶಿ ವಿನಿಮಯ ಮೀಸಲು ನಿಧಿ ನಿಧಾನವಾಗಿ ಕರಗತೊಡಗುತ್ತದೆ. ಈಗಾಗಲೇ ಭಾರತದ ವಿದೇಶಿ ವಿನಿಮಯ ಮೀಸಲು ಸುಮಾರು 690 ಬಿಲಿಯನ್ ಡಾಲರ್ ಮಟ್ಟಕ್ಕೆ ಇಳಿದಿದೆ.

ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟು ಉಲ್ಬಣಗೊಂಡಿರುವ ಈ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಮಟ್ಟದಲ್ಲಿ ಏರಿಕೆ ಕಂಡಿವೆ. ಕೆಲವು ಯುರೋಪಿನ ರಾಷ್ಟ್ರಗಳಲ್ಲಿ ಇಂಧನ ದರಗಳು ಜನಜೀವನವನ್ನು ನೇರವಾಗಿ ಅಸ್ತವ್ಯಸ್ತಗೊಳಿಸುವಷ್ಟು ದುಬಾರಿಯಾಗಿವೆ. ಆದರೆ ಭಾರತದಲ್ಲಿ ಇನ್ನೂ ಒಂದು ರೀತಿಯ ಆರ್ಥಿಕ ಸ್ವಾಭಾವಿಕತೆ ಮತ್ತು ಸ್ಥಿರತೆ ಕಾಣಿಸುತ್ತಿದೆ. ಇದರ ಹಿಂದೆ ದೇಶದ ಆರ್ಥಿಕ ನಿರ್ವಹಣೆ, ಪರ್ಯಾಯ ಖರೀದಿ ವ್ಯವಸ್ಥೆಗಳು, ತಂತ್ರಾತ್ಮಕ ಸಮತೋಲನ ಮತ್ತು ಆಂತರಿಕ ಮಾರುಕಟ್ಟೆಯ ಸಾಮರ್ಥ್ಯ ಪ್ರಮುಖ ಕಾರಣಗಳಾಗಿವೆ. ಆದರೆ ಈ ಸ್ಥಿರತೆ ಶಾಶ್ವತ ಭದ್ರತೆಯ ಸಂಕೇತವಲ್ಲ. ಆಮದು ಅವಲಂಬಿತ ರಾಷ್ಟ್ರವಾದ ಭಾರತವು ದೀರ್ಘಕಾಲ ಸುರಕ್ಷಿತವಾಗಿರಬೇಕಾದರೆ, ಜವಾಬ್ದಾರಿಯುತ ಉಪಭೋಗ ಮತ್ತು ಮಿತವ್ಯಯದ ಸಂಸ್ಕೃತಿ ಬಲವಾಗಬೇಕು.

img 20260324 wa00566036906761714293874 ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ - ಡಾ. ರವೀಶ್ ಎನ್. ಎಸ್

ರೂಪಾಯಿ ದುರ್ಬಲಗೊಂಡಾಗ ಅದರ ಹೊರೆ ಸಾಮಾನ್ಯ ಜನರ ಮೇಲೆ ಬೀಳುತ್ತದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಔಷಧೀಯ ಕಚ್ಚಾ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ಎಲ್ಲ ಆಮದು ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಇದೇ ಸಮಯದಲ್ಲಿ ಕೈಗಾರಿಕೆಗಳ ಉತ್ಪಾದನೆ ನಿಧಾನಗೊಳ್ಳುತ್ತದೆ; ಉದ್ಯೋಗ ಸೃಷ್ಟಿ ಕುಂಠಿತಗೊಳ್ಳುತ್ತದೆ ಮತ್ತು ಆರ್ಥಿಕ ಬೆಳವಣಿಗೆ ಮಂದಗತಿಯಾಗುತ್ತದೆ. ಅಂದರೆ ಒಂದೆಡೆ ಬೆಲೆ ಏರಿಕೆ, ಮತ್ತೊಂದೆಡೆ ಆರ್ಥಿಕ ಕುಂಠಿತತೆ – ಈ ಎರಡೂ ಒಂದೇ ಸಮಯದಲ್ಲಿ ಸಂಭವಿಸುವ ಸ್ಥಿತಿಯೇ “ಸ್ಟಾಗ್ಫ್ಲೇಶನ್” (Stagflation). ಸ್ಟಾಗ್ಫ್ಲೇಶನ್ ಯಾವುದೇ ದೇಶಕ್ಕೆ ಅತ್ಯಂತ ಅಪಾಯಕಾರಿ ಸ್ಥಿತಿ. ಏಕೆಂದರೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ಬಡ್ಡಿದರ ಹೆಚ್ಚಿಸಿದರೆ ಕೈಗಾರಿಕೆಗಳಿಗೆ ಹೊಡೆತ ಬೀಳುತ್ತದೆ; ಉದ್ಯೋಗ ಕಡಿಮೆಯಾಗುತ್ತದೆ. ಮತ್ತೆ ಆರ್ಥಿಕತೆಯನ್ನು ಉತ್ತೇಜಿಸಲು ಬಡ್ಡಿದರ ಕಡಿಮೆ ಮಾಡಿದರೆ ಬೆಲೆ ಏರಿಕೆ ಮತ್ತಷ್ಟು ಜಾಸ್ತಿಯಾಗುತ್ತದೆ. ಹೀಗಾಗಿ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಎರಡೂ ಸಂಕಷ್ಟಕ್ಕೆ ಸಿಲುಕುತ್ತವೆ. ಮಧ್ಯಮ ವರ್ಗದ ಉಳಿತಾಯ ಕರಗತೊಡಗುತ್ತದೆ; ಸಣ್ಣ ಉದ್ಯಮಿಗಳು ಸಾಲದ ಬಲೆಗೆ ಸಿಲುಕುತ್ತಾರೆ; ರೈತರ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ; ಯುವಕರಿಗೆ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ.

ಆದರೆ ಇಲ್ಲಿ ಒಂದು ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ -ಇಷ್ಟು ಸಂಪನ್ಮೂಲಗಳಿರುವ ಭಾರತ ಏಕೆ ಇನ್ನೂ ಆಮದುಗಳ ಹಿಂದೆ ಓಡುತ್ತಿದೆ? ಜಗತ್ತಿನ ಅತ್ಯಂತ ಫಲವತ್ತಾದ ಕೃಷಿಭೂಮಿಗಳಲ್ಲಿ ಕೆಲವು ನಮ್ಮಲ್ಲಿವೆ. ವರ್ಷಪೂರ್ತಿ ಸೂರ್ಯನ ಬೆಳಕು, ನದಿಗಳು, ಸಮುದ್ರತೀರ, ಯುವ ಜನಸಂಖ್ಯೆ, ತಾಂತ್ರಿಕ ಪ್ರತಿಭೆ, ಅಪಾರ ಮಾನವ ಸಂಪನ್ಮೂಲ – ಇವೆಲ್ಲವೂ ನಮ್ಮ ಬಲ. ಭಾರತವು ಜಗತ್ತಿನ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರ, ಅತಿದೊಡ್ಡ ಯುವ ಜನಸಂಖ್ಯೆಯ ರಾಷ್ಟ್ರ, ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಹೊಂದಿರುವ ರಾಷ್ಟ್ರ. ನಮ್ಮ ಪೂರ್ವಜರು ಕಡಿಮೆ ಸಂಪನ್ಮೂಲಗಳಲ್ಲಿಯೇ ಜಗತ್ತನ್ನು ಆಕರ್ಷಿಸುವಂತಹ ಆರ್ಥಿಕ ವ್ಯವಸ್ಥೆ ನಿರ್ಮಿಸಿದ್ದರು. ಆದರೆ ಇಂದು ನಾವು ಉತ್ಪಾದನೆಗಿಂತ ಉಪಭೋಗದತ್ತ ಹೆಚ್ಚು ಓಡುತ್ತಿದ್ದೇವೆ. ಸ್ಥಳೀಯ ಕೈಗಾರಿಕೆಗಿಂತ ವಿದೇಶಿ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದೇವೆ. ಉಳಿತಾಯವನ್ನು ಉತ್ಪಾದಕ ಹೂಡಿಕೆಗೆ ಹರಿಸುವ ಬದಲು ನಿರ್ಜೀವ ಸಂಗ್ರಹಗಳತ್ತ ತಿರುಗಿಸುತ್ತಿದ್ದೇವೆ. ಇದೇ ಆತಂಕದ ಸಂಗತಿ.

img 20260111 wa00025173398190168097646 ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ - ಡಾ. ರವೀಶ್ ಎನ್. ಎಸ್

ಚಾಣಕ್ಯ ತನ್ನ ‘ಅರ್ಥಶಾಸ್ತ್ರ’ದಲ್ಲಿ “ಕೋಶಮೂಲೋ ಹಿ ರಾಜಾ” ಎಂದು ಹೇಳಿದ್ದಾನೆ – ಅಂದರೆ ರಾಷ್ಟ್ರದ ಶಕ್ತಿ ಅದರ “ಕೋಶ”ದಲ್ಲಿ ಅಡಗಿದೆ. ಇಲ್ಲಿ “ಕೋಶ” ಎಂದರೆ ಕೇವಲ ಹಣದ ಖಜಾನೆ ಮಾತ್ರವಲ್ಲ; ಧಾನ್ಯ, ಚಿನ್ನ, ಸಂಪತ್ತು, ಪಶುಸಂಪತ್ತು, ಜಲಸಂಪತ್ತು ಮತ್ತು ಸಂಕಷ್ಟಕಾಲದಲ್ಲಿ ರಾಷ್ಟ್ರವನ್ನು ರಕ್ಷಿಸುವ ಎಲ್ಲಾ ರೀತಿಯ ಸಂಗ್ರಹಗಳ ಸಮಗ್ರ ಅರ್ಥ. ಪ್ರಾಚೀನ ಭಾರತೀಯ ಆರ್ಥಿಕ ಚಿಂತನೆಗಳಲ್ಲಿ “ಸಂಗ್ರಹ” ಎಂಬುದು ವೈಯಕ್ತಿಕ ವೈಭವಕ್ಕಾಗಿ ಅಲ್ಲ; ಸಮಾಜ ಮತ್ತು ರಾಷ್ಟ್ರದ ರಕ್ಷಣೆಗೆ ಅಗತ್ಯವಾದ ಆರ್ಥಿಕ ಭದ್ರತಾ ವ್ಯವಸ್ಥೆಯಾಗಿತ್ತು. ಇದೇ ಕಾರಣಕ್ಕೆ ಭಾರತವನ್ನು ಒಂದು ಕಾಲದಲ್ಲಿ “ಸೋನೆ ಕಿ ಚಿಡಿಯಾ” ಎಂದು ಕರೆಯಲಾಗುತ್ತಿತ್ತು. ಭಾರತದ ಶ್ರೀಮಂತಿಕೆ ಕೇವಲ ಚಿನ್ನದ ಪ್ರಮಾಣದಲ್ಲಲ್ಲ; ಅದರ ಹಿಂದೆ ಇದ್ದ ಆರ್ಥಿಕ ಶಿಸ್ತು, ಉತ್ಪಾದನಾ ಸಾಮರ್ಥ್ಯ, ಸಂಗ್ರಹ ಮನೋಭಾವ ಮತ್ತು ಸಮೂಹ ಹಿತದ ಚಿಂತನೆಯಲ್ಲಿತ್ತು.

ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳು ಕೇವಲ ಆರಾಧನಾ ಕೇಂದ್ರಗಳಲ್ಲ; ಅವು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. ಜನರು ತಮ್ಮ ಸಂಪತ್ತಿನ ಒಂದು ಭಾಗವನ್ನು ದೇವರಿಗೆ ಸಮರ್ಪಿಸುತ್ತಿದ್ದರು. ಅದರ ಹಿಂದಿನ ಭಾವನೆ ಕೇವಲ ಭಕ್ತಿ ಮಾತ್ರವಲ್ಲ; ರಾಷ್ಟ್ರ ಅಥವಾ ಸಮಾಜಕ್ಕೆ ಆಪತ್ತು ಬಂದಾಗ ಆ ಸಂಪತ್ತು ಸಾರ್ವಜನಿಕ ಹಿತಕ್ಕಾಗಿ ಉಪಯೋಗವಾಗಬೇಕು ಎಂಬ ಆರ್ಥಿಕ ಚಿಂತನೆಯೂ ಅಡಗಿತ್ತು. ಯುದ್ಧ, ಕ್ಷಾಮ, ಪ್ರವಾಹ, ಬರ ಹಾಗೂ ಇತರೆ ವಿಪತ್ತುಗಳ ಸಂದರ್ಭಗಳಲ್ಲಿ ದೇವಾಲಯಗಳ ಸಂಗ್ರಹಗಳನ್ನು ಕೃಷಿ, ಅನ್ನಸತ್ರ, ಶಿಕ್ಷಣ ಮತ್ತು ರಾಜ್ಯರಕ್ಷಣೆಗೆ ಬಳಸಲಾಗುತ್ತಿತ್ತು. ಅಂದರೆ “ದೇವರ ಕೋಶ”ವೆಂದರೆ ಸಮಾಜದ ಸಮೂಹ ಭದ್ರತಾ ನಿಧಿಯಂತೆಯೇ ಕಾರ್ಯನಿರ್ವಹಿಸುತ್ತಿತ್ತು.

ಇಂದು ನಾವು ಮತ್ತೆ ಆ ಚಿಂತನೆಯತ್ತ ಮರಳಬೇಕಾದ ಕಾಲ ಬಂದಿದೆ. ಅನಗತ್ಯ ಚಿನ್ನದ ಖರೀದಿ ಕಡಿಮೆಯಾಗಬೇಕು; ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ಸಿಗಬೇಕು; ಸಮೂಹ ವಾಹನ ಬಳಕೆ, ಇಂಧನ ಮಿತವ್ಯಯ ಮತ್ತು ಜವಾಬ್ದಾರಿಯುತ ಉಪಭೋಗ ಜೀವನಶೈಲಿಯ ಭಾಗವಾಗಬೇಕು. ಭಾರತವು ಕೇವಲ 10% ಚಿನ್ನದ ಆಮದು ಕಡಿಮೆ ಮಾಡಿದರೂ ವರ್ಷಕ್ಕೆ ಸುಮಾರು 7 ರಿಂದ 8 ಬಿಲಿಯನ್ ಡಾಲರ್ ವಿದೇಶಿ ವಿನಿಮಯವನ್ನು ಉಳಿಸಬಹುದು. ಇಂಧನ ಬಳಕೆಯಲ್ಲಿ ಕೇವಲ 5% ಮಿತವ್ಯಯ ಸಾಧಿಸಿದರೂ ಸುಮಾರು 10 ರಿಂದ 12 ಬಿಲಿಯನ್ ಡಾಲರ್ ಮೌಲ್ಯದ ತೈಲ ಆಮದು ವೆಚ್ಚವನ್ನು ತಗ್ಗಿಸಬಹುದು. ಅಂದರೆ ಸಾಮಾನ್ಯ ನಾಗರಿಕರ ಸಣ್ಣ ಮಟ್ಟದ ಆತ್ಮನಿಗ್ರಹವೇ ರಾಷ್ಟ್ರದ ಮಟ್ಟದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಭದ್ರತೆಯಾಗಿ ಪರಿವರ್ತನೆಗೊಳ್ಳಬಹುದು.



ನಿಜವಾದ ಶ್ರೀಮಂತಿಕೆ ದೇಹದ ಮೇಲೆ ಧರಿಸುವ ಬಂಗಾರದಲ್ಲಿಲ್ಲ; ಅದು ದೇಶದ ಶಿಕ್ಷಣ, ತಂತ್ರಜ್ಞಾನ, ಸಂಶೋಧನೆ, ಮಾನವ ಸಂಪನ್ಮೂಲ ಮತ್ತು ಆರ್ಥಿಕ ಸ್ಥಿರತೆಯಲ್ಲಿ ಅಡಗಿದೆ. ರಾಮಾಯಣದ ಮಾಯಾ ಜಿಂಕೆಯಂತೆ ಬಂಗಾರದ ಹೊಳಪು ಕ್ಷಣಿಕ ಆಕರ್ಷಣೆಯಾಗಿರಬಹುದು, ಆದರೆ ಅದರ ಬೆನ್ನತ್ತಿ ಹೋದರೆ ರಾಷ್ಟ್ರದ ಆರ್ಥಿಕ ಶಕ್ತಿಯೇ ಅಪಹರಣಕ್ಕೊಳಗಾಗುವ ಅಪಾಯವಿದೆ. ಆದ್ದರಿಂದ ಇಂದಿನ ಕಾಲಘಟ್ಟದಲ್ಲಿ “ಆರ್ಥಿಕ ಆತ್ಮನಿಗ್ರಹ”ವೇ ದೇಶಭಕ್ತಿಯ ಹೊಸ ರೂಪವಾಗಿದೆ. ವೈಯಕ್ತಿಕ ವ್ಯಾಮೋಹಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಯನ್ನು ಪರಮೋಚ್ಚ ಆಭರಣವನ್ನಾಗಿ ಧರಿಸಿದಾಗ ಮಾತ್ರ ಭಾರತವು 2047ರ “ವಿಕಸಿತ ಭಾರತ”ದ ಕನಸನ್ನು ನನಸಾಗಿಸಿ ನಿಜವಾದ ಅರ್ಥದಲ್ಲಿ ‘ವಿಶ್ವಗುರು’ವಾಗಲು ಸಾಧ್ಯ.

img 20260509 wa00043108797537207321497 ಬಂಗಾರದ ಜಿಂಕೆ ಮತ್ತು ಆರ್ಥಿಕ ಆತ್ಮನಿಗ್ರಹ - ಡಾ. ರವೀಶ್ ಎನ್. ಎಸ್

Leave a Reply

Your email address will not be published. Required fields are marked *