ವಾರದಿಂದ ಸ್ಥಗಿತಗೊಂಡ ಕುಡಿಯುವ ನೀರು; ಬಾಳೂರು ಗ್ರಾ.ಪಂ. ಎದುರು ಗ್ರಾಮಸ್ಥರ ದಿಢೀರ್ ಪ್ರತಿಭಟನೆ

Addaheading 20260915 175424 0000 ವಾರದಿಂದ ಸ್ಥಗಿತಗೊಂಡ ಕುಡಿಯುವ ನೀರು; ಬಾಳೂರು ಗ್ರಾ.ಪಂ. ಎದುರು ಗ್ರಾಮಸ್ಥರ ದಿಢೀರ್ ಪ್ರತಿಭಟನೆ
Spread the love

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ಮೂಲಸೌಕರ್ಯ ವಂಚಿತ ಗ್ರಾಮಸ್ಥರ ತಾಳ್ಮೆಯ ಕಟ್ಟೆ ಒಡೆದಿದೆ. ನಿತ್ಯದ ಬಳಕೆಗೆ ಹನಿ ನೀರಿಲ್ಲದೆ ತೀವ್ರ ತೊಂದರೆಗೀಡಾದ ಗ್ರಾಮಸ್ಥರು ಪಂಚಾಯಿತಿ ಆಡಳಿತದ ಧೋರಣೆಯನ್ನು ಖಂಡಿಸಿ ದಿಢೀರ್ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

  ಬಾಳೂರು ಹಾಗೂ ಕಾಳೇಶ್ವರ ಗ್ರಾಮಗಳ ನೂರಾರು ಕುಟುಂಬಗಳಿಗೆ ನೀರು ಪೂರೈಸುವ ಪ್ರಮುಖ ಮೂಲವಾದ ಬೋರ್‌ವೆಲ್ ಮೋಟಾರ್ ಕೆಟ್ಟು ಹಲವು ದಿನಗಳು ಕಳೆದಿವೆ. ಮೋಟಾರ್ ದುರಸ್ತಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕಳೆದ ಐದಾರು ದಿನಗಳಿಂದ ಗ್ರಾಮಗಳಲ್ಲಿ ನೀರು ಸರಬರಾಜು ಪೂರ್ಣ ಪ್ರಮಾಣದಲ್ಲಿ ನಿಂತುಹೋಗಿದೆ. ಇತ್ತೀಚಿನ ಹಬ್ಬದ ದಿನಗಳಲ್ಲೂ ಅಧಿಕಾರಿಗಳು ನೀರಿನ ಪರ್ಯಾಯ ವ್ಯವಸ್ಥೆ ಮಾಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಇದರಿಂದಾಗಿ ಹಬ್ಬದ ಸಂಭ್ರಮವೂ ಇಲ್ಲದೆ ಜನರು ಕೊಡ ಹಿಡಿದು ಊರೂರು ಅಲೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಹಿಡಿಶಾಪ ಹಾಕಿದರು.

20260915 1516111853692288322341461 ವಾರದಿಂದ ಸ್ಥಗಿತಗೊಂಡ ಕುಡಿಯುವ ನೀರು; ಬಾಳೂರು ಗ್ರಾ.ಪಂ. ಎದುರು ಗ್ರಾಮಸ್ಥರ ದಿಢೀರ್ ಪ್ರತಿಭಟನೆ

  ಕುಡಿಯುವ ನೀರಿನ ಬಿಕ್ಕಟ್ಟಿನ ಕುರಿತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಮೌಖಿಕವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಕೇವಲ ಹಾರಿಕೆ ಉತ್ತರ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಬಾಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಕಾರ್ಯವೈಖರಿಯ ವಿರುದ್ಧ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಕಚೇರಿಗೆ ಸರಿಯಾದ ಸಮಯಕ್ಕೆ ಬಾರದೆ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
   ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ತಮ್ಮ ಆಕ್ರೋಶವನ್ನು ಹೊರಹಾಕುತ್ತಾ, “ಗ್ರಾಮದಲ್ಲಿ ಕಡುಬಡವರು, ದಿನಗೂಲಿ ನೌಕರರೇ ಹೆಚ್ಚಿದ್ದಾರೆ. ಇಡೀ ದಿನ ದುಡಿದು ಬಂದು ಮನೆ ಕೆಲಸ ಮಾಡಬೇಕಾದ ನಾವು, ಹಬ್ಬದ ದಿನಗಳಲ್ಲೂ ದೂರದ ಬಾವಿಗಳಿಂದ ನೀರು ಸೇದಿಕೊಂಡು ಬದುಕು ಸಾಗಿಸಬೇಕಾಗಿದೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ನಮಗೆ ಮೂಲಸೌಕರ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದು ಅಸಮಾಧಾನ ಹೊರಹಾಕಿದರು.

ಕೂಡಲೇ ಹೊಸ ಮೋಟಾರ್ ಅಳವಡಿಸಿ ಅಥವಾ ದುರಸ್ತಿಪಡಿಸಿ ನಿಯಮಿತ ನೀರು ಸರಬರಾಜು ಆರಂಭಿಸದಿದ್ದರೆ ಬಾಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಬೃಹತ್ ಮಟ್ಟದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು” ಎಂದು ಗ್ರಾಮಸ್ಥರು ಎಚ್ಚರಿಸಿದರು.

  ಈ ಸಂದರ್ಭದಲ್ಲಿ ಯುವ ಮುಖಂಡರಾದ ವಿನಯ್ ಬಾಳೂರು, ಅರುಣ್ ಜಿ., ಮಧು, ರವಿ, ಜಯಪ್ಪ ಹಾಗೂ ಕಮಲಮ್ಮ, ಸರೋಜಮ್ಮ, ಸುಮಾ ಸೇರಿದಂತೆ ಬಾಳೂರು ಗ್ರಾಮದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

file 000000003f5c8208a0b120fec3430d9d1327727718487903363 ವಾರದಿಂದ ಸ್ಥಗಿತಗೊಂಡ ಕುಡಿಯುವ ನೀರು; ಬಾಳೂರು ಗ್ರಾ.ಪಂ. ಎದುರು ಗ್ರಾಮಸ್ಥರ ದಿಢೀರ್ ಪ್ರತಿಭಟನೆ

Leave a Reply

Your email address will not be published. Required fields are marked *

error: Content is protected !!