ರಿಪ್ಪನ್ಪೇಟೆ: ಸಮೀಪದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪಿತೃಪಕ್ಷದ ಅವಧಿಯಲ್ಲಿ ನಡೆಯುವ ಈ ಜಾತ್ರೆಯಲ್ಲಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ. ರೈತರು ತಾವು ಬೆಳೆದ ಶುಂಠಿ ಮತ್ತು ಅಡಿಕೆ ಬೆಳೆಗಳಿಗೆ ರೋಗಬಾಧೆ ತಟ್ಟದಿರಲಿ ಎಂದು ಪ್ರಾರ್ಥಿಸಿ, ಬೆಳೆಗಳನ್ನು ದೇವಿಗೆ ಅರ್ಪಿಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ. ಮೊಸರನ್ನದ ಬುತ್ತಿ ತಯಾರಿಸಿ ನೈವೇದ್ಯ ಅರ್ಪಿಸಿದ ಬಳಿಕ ಮೀಸಲಿಟ್ಟ ಬೆಣ್ಣೆಯನ್ನು ಬಂಡೆಗೆ ಎಸೆಯುವ ಪದ್ಧತಿಯೂ ಇದೆ.
ಜಾತ್ರೆಯ ಅಂಗವಾಗಿ ಬೆಳಗಿನ ಜಾವ ಪ್ರಧಾನ ಅರ್ಚಕ ಭಾಸ್ಕರ್ ಜೋಯಿಸ್ ಅವರ ನೇತೃತ್ವದಲ್ಲಿ ದೇವಿಗೆ ಅಭಿಷೇಕ, ಪುಷ್ಪಾಲಂಕಾರ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಮುತ್ತೈದೆಯರಿಗೆ ಅರಿಶಿಣ, ಕುಂಕುಮ, ಬಳೆ ಹಾಗೂ ರವಿಕೆ ನೀಡಿ ಉಡಿ ತುಂಬುವ ಸಂಪ್ರದಾಯವೂ ನಡೆಯಿತು.
ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುವ ದಂಪತಿಗಳು ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸುವುದು ಕ್ಷೇತ್ರದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಜೇನುಕಲ್ಲಮ್ಮ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ ಎಂದು ಪ್ರಧಾನ ಅರ್ಚಕ ಭಾಸ್ಕರ್ ಜೋಯಿಸ್ ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮತ್ತು ಜಾತ್ರಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು.















Leave a Reply