ಹೊಸನಗರ: ತಾಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹೊಳೆಯಲ್ಲಿ ಹುಲಿ ದಾಳಿಯಿಂದ ರಕ್ಷಿಸಿಕೊಳ್ಳಲು ಹೋರಾಡಿ ವೀರಮರಣವನ್ನಪ್ಪಿದ ವ್ಯಕ್ತಿ ಹಾಗೂ ಆತನ ಪತ್ನಿಯ ಸಹಗಮನವನ್ನು ಚಿತ್ರಿಸಿರುವ ಅಪರೂಪದ ವೀರಗಲ್ಲು ಶಿಲ್ಪವೊಂದು ಪತ್ತೆಯಾಗಿದೆ. ಸಂಶೋಧಕರಾದ ಆದಿತ್ಯ ನಂಜವಳ್ಳಿ ಮತ್ತು ವಡಗೆರೆ ಸುದರ್ಶನ್ ಸಿಂಗ್ ಅವರು ಈ ಐತಿಹಾಸಿಕ ಮಹತ್ವದ ವೀರಗಲ್ಲನ್ನು ಬೆಳಕಿಗೆ ತಂದಿದ್ದಾರೆ.
ಹುಲಿಯೊಂದಿಗೆ ಹೋರಾಟದ ರೋಚಕ ದೃಶ್ಯ
ಸುಮಾರು ಎರಡು ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಿರುವ ಈ ವೀರಗಲ್ಲಿನಲ್ಲಿ ಹುಲಿಯೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ ವ್ಯಕ್ತಿಯ ಕೆಚ್ಚೆದೆಯ ಚಿತ್ರಣವಿದೆ. ವಿಶೇಷವಾಗಿ, ವೀರನ ಮರಣದ ಬಳಿಕ ಆತನ ಪತ್ನಿ ಸಹಗಮನ ಮಾಡಿದ ಘಟನೆಯನ್ನೂ ಶಿಲ್ಪದಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ.
ವೀರನ ಹಿಂಭಾಗದಲ್ಲಿ ಆತನ ಜೊತೆಗಾರನ ಚಿತ್ರವನ್ನೂ ಕೆತ್ತಲಾಗಿದ್ದು, ಅಂದಿನ ಕಾಲದ ಬೇಟೆ ಮತ್ತು ಅರಣ್ಯ ಜೀವನದ ಹಲವು ಕುತೂಹಲಕಾರಿ ಮುಖಗಳನ್ನು ಇದು ತೆರೆದಿಡುತ್ತದೆ.
ಸೂರ್ಯ, ಚಂದ್ರ, ಶಿವಲಿಂಗದ ಪ್ರತೀಕಗಳು
ಶಿಲ್ಪದಲ್ಲಿ ಸೂರ್ಯ, ಚಂದ್ರ, ಶಿವಲಿಂಗ, ಹಸು–ಕರು ಹಾಗೂ ಬೇಟೆನಾಯಿ ಸೇರಿದಂತೆ ವಿವಿಧ ಸಾಂಕೇತಿಕ ಚಿತ್ರಗಳನ್ನು ಕೆತ್ತಲಾಗಿದೆ. ಈ ಪ್ರತೀಕಗಳು ಶಿಲ್ಪದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಮಹತ್ವದ ಕೊಂಡಿಯಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿರುವ ಮರದ ಚಿತ್ರಣವು, ಹುಲಿ ಎದುರಾದ ಈ ಭೀಕರ ಘಟನೆ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿರಬಹುದು ಎಂಬುದನ್ನು ಸೂಚಿಸುತ್ತದೆ.
ವಿಜಯನಗರೋತ್ತರ ಕಾಲಘಟ್ಟದ ಶಿಲ್ಪ
ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಶೇಜೇಶ್ವರ ಅವರ ಅಭಿಪ್ರಾಯದಂತೆ, ಈ ವೀರಗಲ್ಲು ವಿಜಯನಗರೋತ್ತರ ಕಾಲಘಟ್ಟಕ್ಕೆ ಸೇರಿದ ಶಿಲ್ಪವಾಗಿದೆ. ಶಿಲ್ಪದಲ್ಲಿನ ಚಿತ್ರಣಗಳು ಅಂದಿನ ಜನಜೀವನ, ಅರಣ್ಯ ಪರಿಸರ, ಬೇಟೆ ಪದ್ಧತಿ ಹಾಗೂ ವೀರಮರಣದ ಸ್ಮರಣೆಯನ್ನು ದಾಖಲಿಸುವ ಪ್ರಮುಖ ಐತಿಹಾಸಿಕ ಸಾಕ್ಷ್ಯವಾಗಿವೆ.
ಸ್ಥಳೀಯವಾಗಿ ಈ ಶಿಲ್ಪವನ್ನು ಯಾರೋ ನದಿಗೆ ತಂದು ಹಾಕಿರುವ ಸಾಧ್ಯತೆಯೂ ಇದ್ದು, ಶಿಲ್ಪದ ಮೂಲ ನೆಲೆ, ನಿಖರ ಕಾಲಮಾನ ಹಾಗೂ ಅದರ ಹಿಂದಿರುವ ಐತಿಹಾಸಿಕ ಹಿನ್ನೆಲೆಯ ಕುರಿತು ಇನ್ನಷ್ಟು ವಿಸ್ತೃತ ಅಧ್ಯಯನ ನಡೆಯಬೇಕಿದೆ.















Leave a Reply