
ಹೊಸನಗರ: ಕನ್ನಡ ನಾಡು-ನುಡಿಯ ಬೆಳವಣಿಗೆಗಾಗಿ ಶ್ರಮಿಸಿದ ಹಿರಿಯರನ್ನು ಗುರುತಿಸಿ ಸ್ಮರಿಸುವುದೇ ದತ್ತಿ ನಿಧಿ ಕಾರ್ಯಕ್ರಮಗಳ ಮುಖ್ಯ ಉದ್ದೇಶ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶಮೂರ್ತಿ ಹೇಳಿದರು.

ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿ. ನಾರಾಯಣ ಶೇಷಗಿರಿ ಕಾಮತ್ ಹಾಗೂ ಶ್ರೀಮತಿ ಲಕ್ಷ್ಮೀಬಾಯಿ ಎನ್. ಕಾಮತ್ ಅವರ ಸ್ಮರಣಾರ್ಥ ಕಸಾಪ ಅಂಗಣದಲ್ಲಿ ಆಯೋಜಿಸಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗಾಗಿ ಜೀವನಪೂರ್ತಿ ಸೇವೆ ಸಲ್ಲಿಸಿದ ಹಿರಿಯರ ಸಾಧನೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು. ಕನ್ನಡ ನಾಡು-ನುಡಿಗೆ ತ್ಯಾಗ ಮಾಡಿದವರ ಹೆಸರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ಬೆಳಕಿನ ದಿನದ ಅಂಗವಾಗಿ ಹಾಗೂ ಡಾ. ರಾಜ್ಕುಮಾರ್ ನೇತ್ರದಾನ ಜಾಗೃತಿ ದಿನದ ಸ್ಮರಣಾರ್ಥ ರಾಜ್ ಗೀತೆಗಳ ಗಾಯನ ಕಾರ್ಯಕ್ರಮವೂ ನಡೆಯಿತು. ಸ್ಥಳೀಯ ಗಾಯಕರು ರಾಜ್ಕುಮಾರ್ ಅಭಿನಯದ ಜನಪ್ರಿಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ದತ್ತಿದಾನಿಗಳಾದ ಶ್ರೀ ಮಂಜುನಾಥ ಕಾಮತ್ ಅವರು ಡಾ. ರಾಜ್ಕುಮಾರ್ ಅವರೊಂದಿಗೆ ಹೊಂದಿದ್ದ ಒಡನಾಟ ಹಾಗೂ ಗೋಕಾಕ್ ಚಳವಳಿಯ ಸಂದರ್ಭಗಳ ಬಗ್ಗೆ ಸ್ಮರಣೀಯ ಘಟನೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳು ಮತ್ತು ಕಾರ್ಯಕ್ರಮಗಳ ಉದ್ದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕನ್ನಡ ವಿಷಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳು 125ಕ್ಕೆ 125 ಅಂಕಗಳನ್ನು ಗಳಿಸಲು ಕಾರಣರಾದ ಶ್ರೀಮತಿ ಗೀತಾ ಎಚ್.ಕೆ. ಸಹಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ ಅಂಚಟಗೇರಿ, ತಾಲೂಕು ಹುಬ್ಬಳ್ಳಿ ಅವರನ್ನು ಅಭಿನಂದಿಸಲಾಯಿತು. ಹಾಗೆಯೇ ಹೊಸನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ಹಿನ್ನೆಲೆ ಶ್ರೀ ಅಶ್ವಿನ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಅಶ್ವಿನಿ ಪಂಡಿತ್, ಸುಜಾತಾ ಸುರೇಶ್, ಸುಜಾತಾ ಕೆ.ಜಿ. ನಾಗೇಶ್, ವಾಸಂತಿ ರಾಜೇಂದ್ರ ಕೊತ್ವಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















Leave a Reply