ಶೇ.100ರಷ್ಟು ಫಲಿತಾಂಶ ಪಡೆದ 14 ಸರ್ಕಾರಿ ಶಾಲೆಗಳು | ಒಟ್ಟು 1546 ವಿದ್ಯಾರ್ಥಿಗಳಲ್ಲಿ 1529 ಮಂದಿ ಉತ್ತೀರ್ಣ
ಹೊಸನಗರ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೊಸನಗರ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ಶೇ.98.90 ಫಲಿತಾಂಶ ದಾಖಲಿಸಿ ಜಿಲ್ಲೆಯಲ್ಲೇ ಮಾದರಿಯಾಗಿದೆ. ಕಳೆದ ಸಾಲಿನಿಗಿಂತ ಶೇ.4.84 ಏರಿಕೆ ಕಾಣಿಸಿಕೊಂಡಿರುವುದು ತಾಲೂಕಿನ ಶಿಕ್ಷಣದ ಗುಣಮಟ್ಟವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ತಾಲೂಕಿನ 40 ಪ್ರೌಢಶಾಲೆಗಳಿಂದ 1546 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 1529 ಮಂದಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ, ತಾಲೂಕಿನ ಯಾವುದೇ ಶಾಲೆಯ ಫಲಿತಾಂಶ ಶೇ.90 ಕ್ಕಿಂತ ಕಡಿಮೆ ಆಗಿಲ್ಲ ಎಂಬುದು ಶಿಕ್ಷಣ ವ್ಯವಸ್ಥೆಯ ಸಮಗ್ರ ಬೆಳವಣಿಗೆಯ ಸಂಕೇತವಾಗಿದೆ.
ತಾಲೂಕಿನ ಒಟ್ಟು 19 ಸರ್ಕಾರಿ ಪ್ರೌಢಶಾಲೆಗಳಿಂದ 814 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ ಬರೋಬ್ಬರಿ 806 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಸಾಧನೆ ಮೆರೆದಿದ್ದು, ಕೇವಲ 8 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ.
ಒಟ್ಟು 14 ಸರ್ಕಾರಿ ಪ್ರೌಢಶಾಲೆಗಳು ಶೇ.100 ಫಲಿತಾಂಶ
ಈ ಸಾಧನೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದಾಗಿದೆ. ಒಟ್ಟು 14 ಸರ್ಕಾರಿ ಪ್ರೌಢಶಾಲೆಗಳು ಶೇ.100 ಫಲಿತಾಂಶ ದಾಖಲಿಸಿರುವುದು ಗಮನಾರ್ಹ. ಜಯನಗರ, ಬೆಳ್ಳೂರು, ಹೊಸನಾಡು, ಸೋನಲೆ, ಕಾರಣಗಿರಿ, ನಗರ, ಹೆದ್ದಾರಿಪುರ, ಕಾನುಗೋಡು, ಮಸಗಲ್ಲಿ, ಕೋಡೂರು, ನಿಟ್ಟೂರು, ಸಂಪೇಕಟ್ಟೆ, ಚಿಕ್ಕಜೇನಿ ಸೇರಿದಂತೆ ಹೊಸನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವು ಶೇ.100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.

ಇದರೊಂದಿಗೆ, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳೂ ಕೂಡ ಶೇ.100 ಫಲಿತಾಂಶ ದಾಖಲಿಸಿರುವುದು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರಗತಿಗೆ ಸಾಕ್ಷಿಯಾಗಿದೆ. ಗೇರುಪುರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳು ಹಾಗೂ ಯಳಗಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳ ಶ್ರದ್ಧೆ ಮತ್ತು ಶಿಕ್ಷಕರ ಮಾರ್ಗದರ್ಶನದ ಫಲವಾಗಿದೆ.

“ತಾಲೂಕಿನಲ್ಲಿ ದೊರೆತಿರುವ ಈ ಫಲಿತಾಂಶ ಎಲ್ಲರ ಒಗ್ಗಟ್ಟಿನ ಶ್ರಮದ ಪ್ರತಿಫಲವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಸಮಯ ಮೀಸಲಿಟ್ಟು ಮಾರ್ಗದರ್ಶನ ನೀಡಿದ್ದು, ಮಕ್ಕಳು ಅದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರ ಸಹಕಾರವೂ ಪ್ರಮುಖ ಪಾತ್ರವಹಿಸಿದೆ,” – – ಗಣೇಶ್ ಎ. ವೈ , ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸನಗರ
ಖಾಸಗಿ ಮತ್ತು ಅನುದಾನಿತ ಶಾಲೆಗಳೂ ಕೂಡ ಉತ್ತಮ ಪ್ರದರ್ಶನ ನೀಡಿದ್ದು, 12 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.
ತಾಲೂಕಿನ ಟಾಪ್ 3:
ಬಟ್ಟೆಮಲ್ಲಪ್ಪದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ವಿದ್ಯಾರ್ಥಿ ಜೀವನ್ ಎ 625ರಲ್ಲಿ 618 ಅಂಕಗಳನ್ನು ಪಡೆದು ಅಗ್ರಸ್ಥಾನ ಗಳಿಸಿದ್ದಾನೆ. ಹೊಸನಗರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಶ್ರೇಯ ಎಂ.ಎಸ್ (613) ಮತ್ತು ಮಾನ್ಯ ಆರ್ (612) ಕೂಡ ಅತ್ಯುತ್ತಮ ಸಾಧನೆ ತೋರಿದ್ದಾರೆ. ಜೊತೆಗೆ, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರುವುದು ತಾಲೂಕಿನ ಶೈಕ್ಷಣಿಕ ಸಾಧನೆಯ ಕೈಗನ್ನಡಿ.
ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಎ ವೈ, ಸಮನ್ವಯಾಧಿಕಾರಿ ರಂಗನಾಥ್ ಎಂ., ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶೇಷಾಚಲ ಜಿ ನಾಯಕ್, ಟಿಪಿಓ ವಿನಯ್ ಹೆಗಡೆ ಕರ್ಕಿ ಮತ್ತು ನೋಡುಲ್ ಅಧಿಕಾರಿ ರಾಜೇಂದ್ರಪ್ಪ ಎಸ್. ಸೇರಿದಂತೆ ಎಲ್ಲಾ ಅಧಿಕಾರಿಗಳು, ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಹೊಸನಗರ ತಾಲೂಕಿನ ಈ ಶೈಕ್ಷಣಿಕ ಸಾಧನೆಗೆ ಕಾರಣಕರ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ಎ ವೈ ಮತ್ತು ಎಲ್ಲಾ ಶಿಕ್ಷಕ ವೃಂದದವರಿಗೂ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳನ್ನ ಸಲ್ಲಿಸುತ್ತೇವೆ ನಿಮ್ಮ ಈ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.

















Leave a Reply