ಬಸವಣ್ಣ ಎಂದರೆ ಒಂದು ಚೇತನ ಶಕ್ತಿ: ಮಸರೂರು ಉಮೇಶ್
ಹೊಸನಗರ: 12ನೇ ಶತಮಾನದಲ್ಲಿ ಬಸವಣ್ಣ ಎಂದರೆ ಒಂದು ಸಂವಿಧಾನ, ಒಂದು ತತ್ವಜ್ಞಾನ, ಒಂದು ಪ್ರಯೋಗಶಾಲೆಯಂತೆ ನಡೆ-ನುಡಿಗಳಲ್ಲಿ ಪ್ರತಿಫಲಿಸಿದ ಮಹಾನ್ ಚೇತನಶಕ್ತಿ ಎಂದು ಹೊಸನಗರ ತಾಲೂಕು ವೀರಶೈವ ಮಹಾಸಂಘದ ಅಧ್ಯಕ್ಷ ಮಸರೂರು ಉಮೇಶ್ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಬಸವಣ್ಣನವರ ಜಯಂತಿ ಆಚರಿಸಿ, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರ ವಿಚಾರಗಳು ಕೇವಲ 11-12ನೇ ಶತಮಾನಕ್ಕೆ ಸೀಮಿತವಾಗಿಲ್ಲ; ಅವು ಅನಾದಿ ಅನಂತ ಕಾಲಕ್ಕೂ ಪ್ರಸ್ತುತವಾಗಿವೆ. ಸಮಾಜದಲ್ಲಿದ್ದ ಕುರುಡು ನಂಬಿಕೆಗಳ ವಿರುದ್ಧ ವೈಚಾರಿಕ ಹೋರಾಟ ನಡೆಸಿದ ಬಸವಣ್ಣ, ಸಮಾನತೆ ಮತ್ತು ಶ್ರಮದ ಮೌಲ್ಯಗಳನ್ನು ಪ್ರತಿಪಾದಿಸಿದರು ಎಂದು ಹೇಳಿದರು.
ಶರಣರು ತತ್ವಜ್ಞಾನಿಗಳು, ದರ್ಶನಿಕರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಚಿಂತನೆಗೆ ಪ್ರೇರೇಪಿಸಿದರು. ಕಾಯಕದ ಮಹತ್ವವನ್ನು ಸಾರಿದ ಬಸವಣ್ಣನವರು, ಸಮಾಜದಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ನೋಡಬೇಕೆಂಬ ಸಂದೇಶ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ವೀರಶೈವ ಮಹಾಸಂಘದ ಉಪಾಧ್ಯಕ್ಷ ಚಿಕ್ಕಮಠ ಹಾಲಪ್ಪ ಮಾತನಾಡಿ, ಬಸವಣ್ಣನವರ ತತ್ವಗಳು ಇಂದು ಕೂಡ ಸಮಾಜಕ್ಕೆ ದಾರಿದೀಪವಾಗಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ ಸಮಾನತೆಯ ತತ್ವವನ್ನು ಆಧಾರವನ್ನಾಗಿಸಿಕೊಂಡಿದ್ದು, ಬಸವಣ್ಣನವರ ಚಿಂತನೆಗಳ ಪ್ರಭಾವವೇ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಚೇರಿಯ ಉಪತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟೋ ಅಧ್ಯಕ್ಷತೆ ವಹಿಸಿ ಬಸವಣ್ಣನವರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ದುಮ್ಮ ವಿನಯಕುಮಾರ್, ಹೆಚ್.ಆರ್. ತೀರ್ಥೇಶ್, ಕಾಡುವಳ್ಳಿ ವಿನಯಕುಮಾರ್, ಬೋಜಪ್ಪ ಗೌಡ, ಶಿರಸ್ತೇದಾರ್ ಕಟ್ಟೆ ಮಂಜುನಾಥ್, ಚಿರಾಗ್, ರಾಘವೇಂದ್ರ, ನಾಗಪ್ಪ, ಸತೀಶ್, ನೀಲಾ ಶಂಕರ್, ವಸಂತ ಮಹೇಶ್, ವೇದಾಂತಪ್ಪ ಗೌಡ, ಡಿ.ವಿ.ಆರ್. ಮಲ್ಲಿಕಾರ್ಜುನ, ಹಲಗುಡ್ಡೆ ರವಿ, ಬಸವರಾಜ್, ಶಿವಾನಂದ ಮುಂತಾದವರು ಉಪಸ್ಥಿತರಿದ್ದರು.
















Leave a Reply