ಅನ್ನದಾನ ಕ್ಷಣಿಕ ತೃಪ್ತಿ ನೀಡಿದರೆ , ವಿದ್ಯಾದಾನ ಜೀವನಪೂರ್ತಿ ಬೆಳಕು ನೀಡುತ್ತದೆ – ಶಾಂತರಾಮ್ ಪ್ರಭು
ರಿಪ್ಪನ್ ಪೇಟೆ: ಜಗತ್ತು ಕಂಡ ಒಂದು ಅಚ್ಚರಿ, ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ಧಪುರುಷರು ಸಿದ್ಧಗಂಗೆಯ ಪೂಜ್ಯ ಸ್ವಾಮೀಜಿಯವರು ಎಂದು ಸಾಹಿತಿಗಳಾದ ಶಾಂತರಾಮ್ ಪ್ರಭುಗಳು ಹೇಳಿದರು.
ಇಂದು ಪಟ್ಟಣದ ಗ್ರಾಮ ಪಂಚಾಯತಿ ಭವನದಲ್ಲಿ ನಡೆದ ಪರಮ ಪೂಜ್ಯ ಲಿಂ||ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮಿಗಳವರ 119ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಅಕ್ಷರಜ್ಞಾನ ಹೊಂದಿದವರೇ ಕೆಲವೊಮ್ಮೆ ಅವಿದ್ಯಾವಂತರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿ “ಅನ್ನದಾನ ಕ್ಷಣಿಕ ತೃಪ್ತಿ ನೀಡಿದರೆ , ವಿದ್ಯಾದಾನ ಜೀವನಪೂರ್ತಿ ಬೆಳಕು ನೀಡುತ್ತದೆ. ಆದ್ದರಿಂದ ವಿದ್ಯಾದಾನವೇ ಶ್ರೇಷ್ಠ ದಾನ” ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿಯ ತತ್ವ ಸಿದ್ಧಾಂತವಿಲ್ಲದ ರಾಜಕಾರಣ ಮಹಾಪಾಪವಾಗಿದ್ದು, ಶೀಲವಿಲ್ಲದ ಶಿಕ್ಷಣ ಸಮಾಜಕ್ಕೆ ಶೋಭೆ ತರುವುದಿಲ್ಲ. ಸಂಸ್ಕಾರಯುತ ಶಿಕ್ಷಣದ ಮೂಲಕ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡುವುದು ಇಂದಿನ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಗ್ಗಲಿ ಲಿಂಗಪ್ಪ ಅವರು ಮಾತನಾಡಿ ಕಳೆದ 11 ವರ್ಷಗಳ ಹಿಂದೆ ನಮ್ಮೊಂದಿಗೆ ಆರ್.ರಾಘವೇಂದ್ರ ,ಸುಧೀಂದ್ರ ಪೂಜಾರಿ ,ಸತೀಶ್ ಹೆಗಡೆ ಅವರಂತಹ ಸಮಾನ ಮನಸ್ಕ ಸ್ನೇಹಿತರೊಂದಿಗೆ ಸೇರಿ ಮಹಾಸ್ವಾಮಿಗಳ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೆವು. ಶ್ರೀಗಳ ವಿಚಾರ,ಅವರ ಮಾನವತೆಯ ಚಿಂತನೆಗಳು ಅವರ ಸೇವಾ ಕಾರ್ಯಗಳನ್ನು ಸ್ಮರಿಸುವ ಕಾರ್ಯ ದಿಂದ ಇಂದು ನೂರಾರು ಮಂದಿಗೆ ಅವರ ವಿಚಾರವನ್ನು ತಲುಪಿಸು ಕೆಲಸವು ಈ ಕಾರ್ಯಕ್ರಮದಿಂದ ನಡೆಯುತ್ತಿದೆ ಎಂದು ಹೇಳಿದರು.

ತದನಂತರ ಮಾತನಾಡಿದ ವೀರಶೈವ ಸಮಾಜದ ಅಧ್ಯಕ್ಷರಾದ ಮಸರೂರು ಉಮೇಶ್ ಪರಮ ಪೂಜ್ಯ ಶ್ರೀಗಳ ಸೇವೆಯನ್ನು ನಾವು ಸದಾ ಹೀಗೆ ಸ್ಮರಿಸುತ್ತಿರಬೇಕು ಇಂತಹ ಮಹಾಪುರುಷರ ಜನ್ಮ ದಿನಾಚರಣೆ ಕಾರ್ಯಕ್ರಮ ದಿಂದ ಸಮಾಜದಲ್ಲಿ ಮಾನವ ಧರ್ಮದ ಸಂದೇಶಗಳು ಪಸರಿಸಲು ಸಾಧ್ಯವಾಗುತ್ತದೆ ಎಂದರು.

ಪಿ.ಎಸ್.ಐ ರಾಜುರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಶ್ರೀಧರ್ ನಿರೂಪಿಸಿದರು, ನಾಗರತ್ನ ದೇವರಾಜ್ ಪ್ರಾರ್ಥಿಸಿದರು,ದೂನ ಸೋಮಶೇಖರ್ ಸ್ವಾಗತಿಸಿದರು, ಪದ್ಮಾಸುರೇಶ್ ವಂದಿಸಿದರು.
ಸತೀಶ್ ಹೆಗಡೆ,ಅಡಿಕಟ್ಟು ಕರಿಬಸಪ್ಪ,ಆರ್.ರಾಘವೇಂದ್ರ, ಸುಧೀಂದ್ರ ಪೂಜಾರಿ,ಈಶ್ವರ್ ಶೆಟ್ಟಿ, ವರ್ತೇಶ್ ,ತ. ಮ ನರಸಿಂಹ, ಮಂಜುನಾಥ ಆಚಾರ್,ಮಲ್ಲಿಕಾರ್ಜುನ, ಗೋಪಾಲ್, ಲೀಲಾ ಶಂಕರ್,ಆರ್ ಡಿ ಶೀಲಾ,ಪದ್ಮಾ ಇದ್ದರು.

















Leave a Reply