ಹುಂಚ : ಪಾರಂಪರಿಕ ಜಿನಾಗಮೋಕ್ತ ಶಾಸ್ತ್ರದನ್ವಯ ಧ್ವಜಾರೋಹಣ ಮಾಡಿ ಆರಂಭವಾದ ಆರು ದಿನಗಳ ವಾರ್ಷಿಕ ಮಹಾರಥೋತ್ಸವವು ಇಂದು ಧ್ವಜಾವರೋಹಣ ಮಾಡುವ ಮೂಲಕ ಸಂಪನ್ನಗೊಂಡಿತು.
ಶ್ರೀ ಜೈನಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಆರಾಧನೆಗಳು, ನಾಗವಾಹನೋತ್ಸವ, ಸಿಂಹವಾಹನೋತ್ಸವ, ಬೆಳ್ಳಿ ರಥೋತ್ಸವ, ಪುಷ್ಪರಥೋತ್ಸವ, ಬಲಿ ಉತ್ಸವಗಳು ಪೂರ್ವ ಪರಂಪರೆಯಂತೆ ನೆರವೇರಿದವು.
ಅಗ್ರೋದಕವನ್ನು ಕುಮದ್ವತಿ ತೀರ್ಥದಿಂದ ಸನ್ನಿಧಿಗೆ ಅರ್ಪಿಸಲಾಯಿತು. ಪಲ್ಲಕ್ಕಿಯಲ್ಲಿ ಅವಭೃತ ಜಿನಬಿಂಬಗಳನ್ನು ನಗರ ರಾಜಬೀದಿಯಿಂದ ಸಡಗರದ ಶೋಭಾಯಾತ್ರೆಯೊಂದಿಗೆ ಜಿನಸ್ತುತಿ ನಡುವೆ ತರಲಾಯಿತು.
ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಅಧಿದೇವತೆ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶಾಸ್ತ್ರೋಕ್ತ ಪೂಜೆ ಸಲ್ಲಿಸಲಾಯಿತು. ಊರಿನ ಪರಭಕ್ತವೃಂದ, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಹಾಗೂ ದೇಶದ ಹಲವು ರಾಜ್ಯಗಳಿಂದ ಬಂದ ಭಕ್ತರು ಕುಂಕುಮೋತ್ಸವದಲ್ಲಿ ಭಕ್ತಿ ಸಂಚಲನ ಮೂಡಿಸಿದರು.
ಶ್ರೀಕ್ಷೇತ್ರದ ಭಕ್ತರನ್ನು ಸದಾ ಹರಸುತ್ತಿರಲಿ ಎಂದು ಪೂಜ್ಯ ಶ್ರೀಗಳು ಶ್ರೀಮಂತಾಕ್ಷತೆ ನೀಡಿ ಆಶೀರ್ವದಿಸಿದರು. ಸೇವಾದಾರರಾದ ಮನೋಜಕುಮಾರ್ ಪಾಟ್ಣಿ ಮತ್ತು ಶ್ರೀಮತಿ ಸಂಗೀತಾ ಪಾಟ್ಣಿ ಅವರನ್ನು ಪೂಜ್ಯ ಶ್ರೀಗಳು ಗೌರವಿಸಿದರು. ಭೋಜನ, ಉಪಹಾರ, ಪುಷ್ಪಾಲಂಕಾರ ಮತ್ತು ಸರ್ವವಾಧ್ಯ ಸೇವೆ ಸಲ್ಲಿಸಿದವರನ್ನು ಶ್ರೀಗಳು ಅಭಿನಂದಿಸಿದರು.
ಕೃತಜ್ಞತೆ ಸಮರ್ಪಣೆ :
ವಾರ್ಷಿಕ ಮಹಾರಥೋತ್ಸವ ಸಂದರ್ಭದಲ್ಲಿ ಸಹಕರಿಸಿದ ಪೊಲೀಸ್ ಇಲಾಖೆ, ಮೆಸ್ಕಾಂ ವಿದ್ಯುತ್ ಇಲಾಖೆ, ಪಂಚಾಯತ್, ಕಂದಾಯ, ಆರೋಗ್ಯ ಇಲಾಖೆ, ಗೃಹರಕ್ಷಕ ದಳ ಮತ್ತು ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿ, ಶ್ರೀಮಠದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ನೇ. ಮಗದುಮ್ಮ ಹಾಗೂ ಆಡಳಿತಾಧಿಕಾರಿ ಸಿ.ಡಿ. ಅಶೋಕ್ ಕುಮಾರ್ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾಡಳಿತ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನು ಗೌರವಿಸಲಾಯಿತು. ಪುರೋಹಿತರಾದ ಪದ್ಮರಾಜ್ ಇಂದ್ರ ಮತ್ತು ಸಹಪುರೋಹಿತರನ್ನು ಪೂಜ್ಯ ಶ್ರೀಗಳು ಗೌರವಿಸಿದರು..














Leave a Reply