ಶಿವಮೊಗ್ಗ ಫೆ. 24: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ ಮಾರಿಕಾಂಬ ಜಾತ್ರೆಯ ಸಂಭ್ರಮಕ್ಕೆ ಸಜ್ಜಾಗಿದೆ. ಜಾತ್ರೆ ಪ್ರಯುಕ್ತ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತವು ವಿಶೇಷ ಸಂಚಾರ ನಿಯಮಗಳನ್ನು ಜಾರಿಗೆ ತಂದಿದೆ. ಫೆಬ್ರವರಿ 24ರಿಂದ 28ರವರೆಗೆ ಜಾತ್ರೆ ಅದ್ಧೂರಿಯಾಗಿ ನಡೆಯಲಿದ್ದು, ಈ ಅವಧಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲಾಧಿಕಾರಿ Prabhulinga Kavalikatti ಅವರು ಆದೇಶ ಹೊರಡಿಸಿ, ಜಾತ್ರೆ ಅಂಗವಾಗಿ ನಡೆಯಲಿರುವ ರಾಜಬೀದಿ ಉತ್ಸವ, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇವಸ್ಥಾನ ಸುತ್ತ 500 ಮೀ. ವ್ಯಾಪ್ತಿಯಲ್ಲಿ ಸಂಪೂರ್ಣ ನಿರ್ಬಂಧ:
ಮಾರಿಕಾಂಬ ದೇವಸ್ಥಾನದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ
ಫೆ. 24ರಿಂದ 28ರವರೆಗೆ ಹೊಳೆಬಸ್ ಸ್ಟಾಪ್‌ನಿಂದ ಬೆಕ್ಕಿನ ಕಲ್ಮಠದ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ವಾಹನ ಸಂಚಾರ ಹಾಗೂ ನಿಲುಗಡೆಗೆ ಅವಕಾಶವಿಲ್ಲ.
ಫೆ. 24ರಂದು ಮುಂಜಾನೆ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜಾರ್ ಹಾಗೂ ಶಿವಪ್ಪ ನಾಯಕ ಸರ್ಕಲ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ.
ಭಾರಿ ವಾಹನಗಳಿಗೆ ಬದಲಿ ಮಾರ್ಗ:
ಬೆಂಗಳೂರು, ಭದ್ರಾವತಿ ಹಾಗೂ ಚಿತ್ರದುರ್ಗ ಕಡೆಯಿಂದ ಬರುವ ಭಾರಿ ವಾಹನಗಳು ಮತ್ತು ಬಸ್‌ಗಳು ಎಂಆರ್‌ಎಸ್ ಸರ್ಕಲ್ ಬೈಪಾಸ್ ಮೂಲಕ ನಗರ ಪ್ರವೇಶಿಸಬೇಕು.
ಸವಳಂಗ ಹಾಗೂ ಶಿಕಾರಿಪುರ ಕಡೆಯಿಂದ ಬರುವ ವಾಹನಗಳು ಆಲ್ಕೊಳ ಮತ್ತು ಸಾಗರ ರಸ್ತೆ ಮೂಲಕ ಸಂಚರಿಸಬೇಕು ಎಂದು ಸೂಚಿಸಲಾಗಿದೆ.
ತುರ್ತು ಸೇವೆಗೆ ವಿನಾಯಿತಿ:
ಪೊಲೀಸ್ ವಾಹನಗಳು, ಆಂಬುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.ಜಾತ್ರೆಯ ಅವಧಿಯಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

















Leave a Reply