The much-awaited bridge being constructed across the backwaters of the Linganamakki reservoir on the Sharavathi River near Hasirumakki in Sagara taluk of the district will be completed by the end of May and opened for public traffic, said PWD Minister Satish Jarkiholi.
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಹಸಿರುಮಕ್ಕಿ ಬಳಿ ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಸೇತುವೆ ಕಾಮಗಾರಿಯನ್ನು ಮೇ ಮಾಸಾಂತ್ಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಹಿನ್ನೀರಿನ ಲಾಂಚ್ ಮೂಲಕ ಸಂಚರಿಸಿ ಕಾಮಗಾರಿಯನ್ನು ಖುದ್ದಾಗಿ ವೀಕ್ಷಿಸಿದರು.
ರೂ. 125.67 ಕೋಟಿ ವೆಚ್ಚದ ಯೋಜನೆ ನಂತರ ಮಾತನಾಡಿದ ಸಚಿವರು, “ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸೇತುವೆ ಕಾಮಗಾರಿಗೆ ನಮ್ಮ ಸರ್ಕಾರವು ಅಗತ್ಯವಿದ್ದ ರೂ. 56.14 ಕೋಟಿ ಅನುದಾನ ಬಿಡುಗಡೆಗೊಳಿಸಿ ಮರುಚಾಲನೆ ನೀಡಿದೆ. KRDCL ವತಿಯಿಂದ ಒಟ್ಟು ರೂ. 125.67 ಕೋಟಿ ಅಂದಾಜು ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದ್ದು, ಮೇ ತಿಂಗಳಲ್ಲಿ ಮುಖ್ಯಮಂತ್ರಿಗಳ ಹಸ್ತದಿಂದ ಉದ್ಘಾಟನೆ ನೆರವೇರಿಸಲಾಗುವುದು” ಎಂದರು.
ಕಾಮಗಾರಿಯಲ್ಲಿ ಬಳಸಲಾದ ದೈತ್ಯ ಕಾಂಕ್ರೀಟ್ ಬ್ಲಾಕ್‌ಗಳಲ್ಲಿ ತಾಂತ್ರಿಕ ನ್ಯೂನತೆ ಕಂಡುಬಂದಿದ್ದರಿಂದ ವಿಳಂಬವಾಗಿದ್ದು, ಇನ್ನು ಮುಂದೆ ಯಾವುದೇ ವಿಳಂಬಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಪ್ರಮುಖ ಪ್ರಯೋಜನಗಳು:
ಅಂತರ ಕಡಿತ: ಸಾಗರದಿಂದ ಕೊಲ್ಲೂರಿಗೆ ಇರುವ ದೂರದಲ್ಲಿ 32 ಕಿ.ಮೀ. ಉಳಿತಾಯವಾಗಲಿದೆ.
ಸಂಪರ್ಕ ಕೊಂಡಿ: ಮಧ್ಯ ಹಾಗೂ ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಸುಲಭ ಸಂಪರ್ಕ ಕಲ್ಪಿಸಲಿದೆ.
ಸಂತ್ರಸ್ತರ ನೆರವು: ಶರಾವತಿ ಹಿನ್ನೀರಿನ ಆರು ಪಂಚಾಯಿತಿ ವ್ಯಾಪ್ತಿಯ ಜನರಿಗೆ ಲಾಂಚ್ ಅವಲಂಬನೆಯಿಂದ ಮುಕ್ತಿ ಸಿಗಲಿದೆ.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡಿ, “ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಆಶಯದಂತೆ ಸೇತುವೆ ಕಾರ್ಯಕ್ಕೆ ವೇಗ ದೊರೆತಿರುವುದು ಸಂತಸ ತಂದಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಶೀಘ್ರವೇ ಲೋಕಾರ್ಪಣೆ ಮಾಡಲಾಗುವುದು,” ಎಂದರು.
ಸಾಗರ ನಗರದ ಅಭಿವೃದ್ಧಿ ಸಾಗರ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಪರಿಹಾರದ ಬಾಕಿ ಮೊತ್ತ ರೂ. 11 ಕೋಟಿಗಳನ್ನು ತಕ್ಷಣವೇ ಮಂಜೂರು ಮಾಡುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ಉಪಸ್ಥಿತರಿದ್ದವರು:
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
















Leave a Reply