ರಿಪ್ಪನ್ ಪೇಟೆ : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ರಿಪ್ಪನ್ ಪೇಟೆಯ ವಿದ್ಯಾರ್ಥಿನಿ ದಿಶಾ ರಾಜ್ಯ ಮಟ್ಟದಲ್ಲಿ 8ನೇ ರ್ಯಾಂಕ್ ಗಳಿಸಿ ಊರಿಗೆ ಕೀರ್ತಿಯನ್ನು ತಂದಿದ್ದಾಳೆ. ವೈಯಕ್ತಿಕ ಸಾಧನೆಯೋದಿಗೆ , ಪೋಷಕರ ಪರಿಶ್ರಮ ಮತ್ತು ತ್ಯಾಗದ ಗೆಲುವಾಗಿದೆ.
P.E.S ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ದಿಶಾ, 600 ಅಂಕಗಳಲ್ಲಿ 592 ಅಂಕಗಳನ್ನು ಗಳಿಸಿ ತನ್ನ ಮೇಲುಗೈ ಸಾಧಿಸಿದ್ದಾಳೆ. ಹಿಂದಿ, ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾಳೆ.

ಈ ಸಾಧನೆಯ ಹಿಂದೆ ರಿಪ್ಪನ್ ಪೇಟೆಯ ಶ್ಯಾಮ್ ಜುವೆಲರ್ಸ್ ನ ಮಾಲೀಕರು ಮತ್ತು ದಿಶಾಳ ಪೋಷಕರಾದ ಸುರೇಶ್ ಮತ್ತು ಸುನೀತಾ ಅವರ ಪಾತ್ರ ಅತ್ಯಂತ ಮಹತ್ತರವಾಗಿದೆ. ರಾಜಸ್ಥಾನದಿಂದ ರಿಪ್ಪನ್ ಪೇಟೆಗೆ ವಲಸೆ ಬಂದು ಜೀವನ ಕಟ್ಟಿಕೊಂಡ ಈ ಕುಟುಂಬ, ತಮ್ಮ ಕಷ್ಟಗಳ ನಡುವೆಯೂ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದೆ. ದಿನನಿತ್ಯದ ವ್ಯವಹಾರದಲ್ಲೇ ನಿರತರಾಗಿದ್ದರೂ, ದಿಶಾಳ ಓದಿಗೆ ಬೇಕಾದ ಪ್ರೋತ್ಸಾಹ, ಶಿಸ್ತು ಮತ್ತು ಬೆಂಬಲವನ್ನು ಯಾವತ್ತೂ ಕಡಿಮೆ ಮಾಡಲಿಲ್ಲ.

ಮಾತೃಭಾಷೆ ರಾಜಸ್ಥಾನಿ ಮಾರ್ವಡಿ ಆಗಿದ್ದರೂ, ದಿಶಾ ಕನ್ನಡ ಭಾಷೆಯ ಮೇಲಿನ ತನ್ನ ಹಿಡಿತವನ್ನು ಅಚ್ಚರಿಯ ಮಟ್ಟಿಗೆ ಬೆಳೆಸಿಕೊಂಡಿದ್ದಾಳೆ. ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿರುವುದು ಆಕೆಯ ಪರಿಶ್ರಮದ ಸ್ಪಷ್ಟ ನಿದರ್ಶನವಾಗಿದೆ. ದಿಶಾಳ ಸಾಧನೆ ಪೋಷಕರ ಪ್ರೋತ್ಸಾಹದ ಜೊತೆಗೆ ಅವಳ ಏಕಾಗ್ರತೆ ಮತ್ತು ನಿರಂತರ ಪರಿಶ್ರಮವೇ ಯಶಸ್ಸಿಗೆ ಕಾರಣ.
ಗ್ರಾಮೀಣ ಹಿನ್ನಲೆಯಲ್ಲಿ ಬೆಳೆದ ವಿದ್ಯಾರ್ಥಿನಿಯಾಗಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. “ಪರಿಶ್ರಮ ಇದ್ದರೆ ಸಾಧನೆ ಸಾಧ್ಯ” ಎಂಬುದಕ್ಕೆ ದಿಶಾ ಜೀವಂತ ಉದಾಹರಣೆಯಾಗಿದ್ದಾಳೆ.
ಇಂದಿನ ಈ ಸಾಧನೆಯೊಂದಿಗೆ ದಿಶಾ ಇನ್ನಷ್ಟು ಉನ್ನತ ಗುರಿಗಳನ್ನು ಹೊಂದಿದ್ದು, ತನ್ನ ಶಿಕ್ಷಣದ ಮೂಲಕ ಸಮಾಜಕ್ಕೂ ದೇಶಕ್ಕೂ ಕೊಡುಗೆ ನೀಡುವ ಕನಸನ್ನು ಕಾಣುತ್ತಿದ್ದಾಳೆ. ಸ್ಥಳೀಯರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ದಿಶಾಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ದಿಶಾ ಅವರ ಈ ಶೈಕ್ಷಣಿಕ ಸಾಧನೆಗೆ ನಾಡಿನ್ಯೂಸ್ ವತಿಯಿಂದ ಅಭಿನಂದನೆಗಳು ನಿಮ್ಮ ಈ ಸಾಧನೆ ಹೀಗೆ ಮುಂದುವರೆಯಲಿ.

















Leave a Reply