ಹೊಸನಗರ: ಮುಳುಗಡೆ ಸಂತ್ರಸ್ಥ ಹೊಸನಗರ ತಾಲೂಕಿನ ಜನರ ಸಂಕಷ್ಟಗಳಿಗೆ ಪರಿಹಾರ ಕಾಣಲು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಯೇ ಪರಿಹಾರ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದರು.ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಕುರಿತು ನಡೆಸುವ ಹೋರಾಟದ ಕುರಿತು ಚರ್ಚೆ ನಡೆಸಲು ಗಾಯತ್ರಿ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರ ರಚನೆಯಿಂದ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿವೆ. ಕ್ಷೇತ್ರದ ಪ್ರತಿಯೊಬ್ಬರೂ ನಿಸ್ವಾರ್ಥವಾಗಿ ಹೋರಾಟ ನಡೆಸುವ ಅಗತ್ಯವಿದೆ. ಅಧಿಕಾರಿವರ್ಗವನ್ನು ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟ ಗಟ್ಟಿಯಾಗಬೇಕಿದೆ. ಯುವ ಜನತೆ, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡವರು, ಸಮಾಜಸೇವಕರು ಹಾಗೂ ಈ ಭಾಗದ ಪ್ರಮುಖರು ಪಕ್ಷಾತೀತವಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಪ್ರಸ್ತುತ ತೀರ್ಥಹಳ್ಳಿ ಕ್ಷೇತ್ರ ಸುಮಾರು ೪೦೦ ಕಿ.ಮೀ. ವ್ಯಾಪ್ತಿ ಹೊಂದಿದೆ. ಕ್ಷೇತ್ರ ಪ್ರವಾಸವೇ ಪ್ರಯಾಸದಾಯಕ. ಭೌಗೋಳಿಕವಾಗಿ ಮೇಘಾಲಯ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ವಿಶೇಷ ಪ್ರಕರಣಗಳಲ್ಲಿ ಭೌಗೋಳಿಕತೆ ಆಧಾರದಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕ್ಷೇತ್ರ ಮಾಡಲಾಗಿದೆ. ಇದೂ ಸಹ ಮುಳುಗಡೆ ಸಮಸ್ಯೆ ಪೀಡಿತವಾಗಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ರಚನೆಗೆ ಕೇಂದ್ರ ಸರಕಾರ ಮುಂದಾಗಬೇಕು ಎಂದರು.

ಮಾಜಿ ಶಾಸಕ ಹರತಾಳು ಹಾಲಪ್ಪನವರು ಮಾತನಾಡಿ ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಅಗತ್ಯವಿದೆ ಇದಕ್ಕಾಗಿ ನಾವು ಸಂಪೂರ್ಣ ಈ ಹೋರಾಟದಲ್ಲಿ ನಿಮ್ಮ ಜೊತೆಗಿದ್ದೇವೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಮತ್ತು ಮಾಜಿ ಸಚಿವನಾಗಿ ಸದಾ ಹೊಸನಗರ ತಾಲೂಕಿನ ಜನರ ಹಿತ ದೃಷ್ಟಿಯಿಂದ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಹೋರಾಟದ ಹಾದಿಯಲ್ಲಿ ಕೆಲವು ತಾಂತ್ರಿಕವಾಗಿ ಕಾನೂನಾತ್ಮಕ ಬದಲಾವಣೆಯನ್ನು ಗಮನಿಸಿಕೊಂಡು ಅದನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿ ಆಗ ಹೋರಾಟದ ಶಕ್ತಿ ಹೆಚ್ಚಾಗುತ್ತದೆ ಇಲ್ಲವಾದರೆ ಕೇವಲ ಒಂದು ಹೋರಾಟವಾಗಿಯೇ ಉಳಿಯುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ಜಿ.ಡಿ.ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ವಿಧಾನಸಭಾ ಕ್ಷೇತ್ರ ರಚನೆಯ ಮಹತ್ವದ ಕುರಿತು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಹನಿಯ ರವಿ ಎನ್.ಆರ್.ದೇವಾನಂದ, ವರ್ತೇಶ್, ಬಿ.ಜಿ.ಚಂದ್ರಮೌಳಿ,ಎನ್. ಸತೀಶ್,ತಿ.ನಾ.ಶ್ರೀನಿವಾಸ್, ಚಿದಂಬರ, ಶ್ರೀಧರ ಉಡುಪ,ಬೆಳ್ಳೂರು ತಿಮ್ಮಪ್ಪ,ಶ್ರೀನಿವಾಸ್ ಕಾಮತ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.ಶಾಸಕ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ ಸಭೆಗೆ ಆಗಮಿಸಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
















Leave a Reply