ಶಿವಮೊಗ್ಗ: ಇತ್ತೀಚೆಗೆ ಶಿಕಾರಿಪುರದಲ್ಲಿ ನಡೆದ ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಆಗಸ್ಟ್ 19ರಂದು ಶಿಕಾರಿಪುರ ಪಟ್ಟಣ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕರೆ ನೀಡಿವೆ. ಹಲ್ಲೆ ಪ್ರಕರಣವನ್ನು ಖಂಡಿಸಿ ಶಿಕಾರಿಪುರದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ರಾಜೇಶ್‌ಗೌಡ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾದ್ಯಂತ ಇತ್ತೀಚಿನ ದಿನಗಳಲ್ಲಿ ಗೋವುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದ ಅವರು, ಹೊಸನಗರ ತಾಲ್ಲೂಕಿನ ಹರತಾಳು ಗ್ರಾಮದಲ್ಲಿ ಆಗಸ್ಟ್ 16ರಂದು ಬೆಳಗಿನ ಜಾವ ಗೋವುಗಳ ಕಳ್ಳತನ ನಡೆದಿರುವುದನ್ನು ಉಲ್ಲೇಖಿಸಿದರು.
ತಡರಾತ್ರಿ ಕಳ್ಳರು ಕೋಟೆಕಟ್ಟೆಯಲ್ಲಿ ಕಟ್ಟಿಹಾಕಿದ್ದ ಜಾನುವಾರುಗಳನ್ನು ವಾಹನಕ್ಕೆ ತುಂಬಿಕೊಂಡು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಜಾನುವಾರುಗಳ ಸದ್ದು ಕೇಳಿ ಎಚ್ಚೆತ್ತ ಮನೆಯವರು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಕಾರ್ಯಕರ್ತರು ತಮ್ಮ ಕಾರಿನಲ್ಲಿ ಕಳ್ಳರ ವಾಹನವನ್ನು ಹಿಂಬಾಲಿಸಿದ್ದರು ಎಂದು ಅವರು ಹೇಳಿದರು.
ಗೋವುಗಳ ಕಳ್ಳರ ಗುಂಪು ಮಾರ್ಗ ಮಧ್ಯೆ ಮತ್ತೊಂದು ವಾಹನವನ್ನು ಕರೆಸಿಕೊಂಡು, ಪೂರ್ವನಿಯೋಜಿತ ರೀತಿಯಲ್ಲಿ ಬಜರಂಗದಳ ಕಾರ್ಯಕರ್ತರ ಕಾರಿಗೆ ತಮ್ಮ ವಾಹನದಿಂದ ಬಲವಾಗಿ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಿಂದ ಕೆಳಗಿಳಿದ ಕಾರ್ಯಕರ್ತರ ಮೇಲೆ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ರಾಜೇಶ್‌ಗೌಡ ಆರೋಪಿಸಿದರು.
ಹಲ್ಲೆಯಲ್ಲಿ ಮೂವರು ಕಾರ್ಯಕರ್ತರಿಗೆ ತೀವ್ರ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್‌ನ ಸಾಗರ ಜಿಲ್ಲಾ ಘಟಕದ ಅಧ್ಯಕ್ಷ ಪ್ರತಿಮಾ ಜೋಗಿ ಮಾತನಾಡಿ, ಸಾಗರ ವಿಭಾಗದಲ್ಲಿಯೂ ಗೋವುಗಳ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು. ಕೇವಲ ಗೋವುಗಳನ್ನು ಕಳ್ಳತನ ಮಾಡಿಕೊಂಡು ಹೋಗುವುದಷ್ಟೇ ಅಲ್ಲದೆ, ಇದನ್ನು ತಡೆಯಲು ಮುಂದಾಗುವ ಕಾರ್ಯಕರ್ತರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವನ್ನು ಅವರು ಮಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಕ್ರಮ ಗೋಸಾಗಾಣಿಕೆದಾರರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿಕಾರಿಪುರ ಬಂದ್‌ಗೆ ಸ್ಥಳೀಯ ಶಾಸಕರ ಬೆಂಬಲವೂ ಇದೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದರು. ಪ್ರತಿಭಟನೆಯಲ್ಲಿ ಶಾಸಕರು ಕೂಡ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಶಿಕಾರಿಪುರದ ವರ್ತಕರಿಗೆ ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪ್ರಾಂತೀಯ ಸಾಮರಸ್ಯ ಪ್ರಮುಖ್ ರಮೇಶ್ ಬಾಬು, ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ, ಪ್ರಮುಖರಾದ ನವೀನ್, ಯೋಗೀಶ್, ಸೋಮಶೇಖರ್ ಹಾಗೂ ಕೀರ್ತಿ ಸೇರಿದಂತೆ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
















Leave a Reply