ಸಾಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಎರಡು ತಿಂಗಳಿಂದ ಉಪನ್ಯಾಸಕರ ಕೊರತೆ ಉಂಟಾಗಿದ್ದು, ಇದರಿಂದ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ. ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ಗಣಿತ, ಬಿಸಿಎ ಹಾಗೂ ಬಿಬಿಎ ಸೇರಿದಂತೆ ಹಲವು ಕೋರ್ಸ್‌ಗಳಿಗೆ ಅಗತ್ಯವಿರುವ ಉಪನ್ಯಾಸಕರ ಕೊರತೆ ಇದೆ. ವಿಶೇಷವಾಗಿ ಗಣಿತ ವಿಷಯದ ತರಗತಿಗಳು ಸೇರಿದಂತೆ ಹಲವು ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅಲ್ಲದೆ ಆಂತರಿಕ ಮೌಲ್ಯಮಾಪನ ಹಾಗೂ ಪ್ರಯೋಗಾಲಯ ತರಗತಿಗಳ ಮೇಲೂ ಉಪನ್ಯಾಸಕರ ಕೊರತೆಯ ಪರಿಣಾಮ ಬೀರಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಸೆಮಿಸ್ಟರ್ ಹಾಗೂ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯದೆ, ಪಠ್ಯಕ್ರಮ ಪೂರ್ಣಗೊಳ್ಳದಿರುವುದು ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ಪಠ್ಯಕ್ರಮ ಪೂರ್ಣಗೊಳ್ಳದಿದ್ದರೆ ಪರೀಕ್ಷೆ ಎದುರಿಸಲು ತೊಂದರೆಯಾಗಲಿದೆ. ಇತರೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಶೈಕ್ಷಣಿಕವಾಗಿ ಹಿಂದುಳಿಯುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪಠ್ಯಕ್ರಮ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಬಿವಿಪಿ ಮುಖಂಡರು ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
















Leave a Reply